ಶ್ರೀನಗರ, ಮೇ 19, ಜಮ್ಮು-ಕಾಶ್ಮೀರದ ಬೇಸಿಗೆ ರಾಜಧಾನಿಯಾದ ಇಲ್ಲಿನ ಡೌನ್‍ಟೌನ್ ನಲ್ಲಿ ಭದ್ರತಾ ಪಡೆಗಳು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ ನಂತರ ಮಂಗಳವಾರ ಬೆಳಿಗಿನ ಜಾವ ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆದಿದೆ. ಉಗ್ರರು ಅಡಗಿರುವ ನಿರ್ದಿಷ್ಟ ಮಾಹಿತಿ ಆಧರಿಸಿ ಜಮ್ಮು-ಕಾಶ್ಮೀರ ಪೊಲೀಸ್‍ನ ವಿಶೇಷ ಕಾರ್ಯಾಚರಣೆ ತಂಡ ಹಾಗೂ ಸಿಆರ್ ಪಿಎಫ್ ಮಂಗಳವಾರ ಮುಂಜಾನೆ 2 ಗಂಟೆ ಸುಮಾರಿಗೆ ನಗರದ ಜನದಟ್ಟಣೆಯ ವ ನವಕಡಲ್‍ನ ಕನೆಮಜಾರ್ ನಲ್ಲಿ ಜಂಟಿ ಕಾರ್ಯಾಚರಣೆ ಆರಂಭಿಸಿದ್ದವು.
ಮನೆಯೊಂದನ್ನು ಗುರಿಯಾಗಿಸಿಕೊಂಡು ಭದ್ರತಾಪಡೆಗಳು ಸಾಗುತ್ತಿದ್ದಾಗ ಅಡಗಿ ಕುಳಿತಿದ್ದ ಉಗ್ರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾಪಡೆಗಳು ಗುಂಡು ಹಾರಿಸಿದಾಗ ಗುಂಡಿನ ಚಕಮಕಿ ನಡೆದಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಉಗ್ರರು ತಪ್ಪಿಸಿಕೊಳ್ಳುವ ಪ್ರಯತ್ನವನ್ನು ತಡೆಯಲು ಇಡೀ ಪ್ರದೇಶವನ್ನು ಸುತ್ತುವರಿಯಲು ಹೆಚ್ಚುವರಿ ಭದ್ರತಾ ಪಡೆಗಳನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ. ಇತ್ತೀಚಿನ ವರದಿಗಳು ಬಂದಾಗ ಗುಂಡಿನ ಚಕಮಕಿ ಮುಂದುವರೆದಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭದ್ರತಾ ಕಾರಣಗಳಿಂದಾಗಿ ಶ್ರೀನಗರದಲ್ಲಿ ಮೊಬೈಲ್ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.