ನವದೆಹಲಿ, ಮೇ 28,ಕೋವಿಡ್-19 ಹಿನ್ನೆಲೆಯಲ್ಲಿ ದೇಶಾದ್ಯಂತ ಘೋಷಣೆಯಾಗಿರುವ ಲಾಕ್ ಡೌನ್ ಹಿನ್ನೆಲೆಲಯಲ್ಲಿ ಪರರಾಜ್ಯಗಳಲ್ಲಿ ಸಿಲುಕಿರುವ ಕಾರ್ಮಿಕರನ್ನು ಅವರ ತವರಿಗೆ ಕಳುಹಿಸಲು ಹಣ ಪಡೆಯಬಾರದು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.ಜೊತೆಗೆ, ದೇಶಾದ್ಯಂತ ಲಾಕ್ ಡೌನ್ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಟಿಕೆಟ್ ದರಗಳನ್ನು ನಿಗದಿಪಡಿಸಬೇಕು ಎಂದು ರೈಲ್ವೆ ಇಲಾಖೆಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ವಲಸಿಗ ಕಾರ್ಮಿಕರ ಪರದಾಟದ ಕುರಿತು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ತ್ರಿಸದಸ್ಯ ಪೀಠ, ಈ ಮಧ್ಯಂತರ ಆದೇಶ ನೀಡಿದೆ. ತಮ್ಮ ಪ್ರಯಾಣದ ಸೌಲಭ್ಯಗಳಿಗಾಗಿ ಕಾಯುತ್ತಿರುವ ಕಾರ್ಮಿಕರಿಗೆ ಆಯಾ ರಾಜ್ಯಗಳ ನಿಗದಿತ ಪ್ರದೇಶಗಳಲ್ಲಿ ಆಹಾರ, ನೀರು ಒದಗಿಸಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ. ಪ್ರಯಾಣದ ವೇಳೆ ಕಾರ್ಮಿಕರಿಗೆ ರೈಲ್ವೆ ಇಲಾಖೆ ಆಹಾರ ಒದಗಿಸಬೇಕು ಮತ್ತು ಬಸ್ ಗಳ ಮೂಲಕ ಸಂಚರಿಸುವವರಿಗೆ ಆಯಾ ಸರ್ಕಾರಗಳು ಆಹಾರ ಪೂರೈಕೆ ಮಾಡಬೇಕು ಜೊತೆಗೆ, ವಲಗೆ ಕಾರ್ಮಿಕರ ನೋಂದಣಿಗಾಗಿ ಕಿಯೋಸ್ಕ್ ಗಳನ್ನು ಸ್ಥಾಪಿಸಬೇಕು ಎಂದು ನಿರ್ದೇಶಿಸಿದೆ. ಲಾಕ್ ಡೌನ್ ವೇಳೆ ಅಲ್ಲಲ್ಲಿ ಸಿಲುಕಿರುವ ಕಾರ್ಮಿಕರು, ಅವರ ನೊಂದಣಿ ಮತ್ತು ಸಂಚಾರದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠ ಸೂಚನೆ ನೀಡಿದೆ. ಈ ವರದಿ ದೊರೆತ ನಂತರ ತಮ್ಮ ತವರಿಗೆ ಮರಳಿದ ಕಾರ್ಮಿಕರ ಆಹಾರ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ವಿಷಯವನ್ನು ಪರಿಗಣಿಸಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ.