ಬೆಂಗಳೂರು 13: ನಮ್ಮ ಮೆಟ್ರೋ ಪ್ರಯಾಣ ದರ ದುಪ್ಪಟ್ಟು ಏರಿಕೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ ಹಿನ್ನೆಲೆಯಲ್ಲಿ ಬಿಎಂಆರ್ಸಿಎಲ್ ಮೆಟ್ರೋ ಪ್ರಯಾಣ ದರ ಸ್ಟೇಜ್ ಆಧಾರದಲ್ಲಿ ಇಳಿಕೆ ಮಾಡಲು ಮುಂದಾಗಿದೆ.
ಸುದ್ದಿಗೋಷ್ಠಿ ನಡೆಸಿದ ಬಿಎಂಆರ್ ಸಿಎಲ್ ಎಂಡಿ ಮಹೇಶ್ವರ್ ರಾವ್ ಅವರು, ದುಪ್ಪಟ್ಟು ದರ ಏರಿಕೆಯಾಗಿರುವ ನಿಲ್ದಾಣಗಳಲ್ಲಿನ ದರವನ್ನು ಪರಿಷ್ಕರಿಸಲಾಗುವುದು. ಇದರಿಂದ ಪ್ರಯಾಣಿಕರಿಗೆ ಸ್ವಲ್ಪ ಮಟ್ಟಿನ ರಿಲೀಫ್ ದೊರೆಯಲಿದೆ ಎಂದು ತಿಳಿಸಿದರು.
ನಮ್ಮ ಮೆಟ್ರೋ ಪ್ರಯಾಣ ದರ ಸ್ಟೇಜ್ ಆಧಾರದಲ್ಲಿ ಇಳಿಕೆ ಮಾಡಲಾಗುವುದು. ಮೆಟ್ರೋ ದರ ಶೇ. 90 ರಿಂದ ಶೇ 100 ರ ವರೆಗೆ ಹೆಚ್ಚಳವಾಗಿರುವ ನಿಲ್ದಾಣಗಳ ಮಧ್ಯೆ ಇಳಿಕೆ ಮಾಡಲಾಗುವುದು. ಶೇ 60 ದರ ಹೆಚ್ಚಳವಾಗಿರುವಲ್ಲಿ ಸ್ಲ್ಯಾಬ್ ಮರ್ಜ್ ಮಾಡುತ್ತೇವೆ. ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೆ ಬರಲಿದೆ ಎಂದು ಅವರು ಹೇಳಿದರು.
ಮೆಟ್ರೋ ಪ್ರಯಾಣ ದರ ಹೆಚ್ಚಳ ಮಾಡುವುದಕ್ಕೆ ಒಂದು ವಿಧಾನ ಇದೆ. ಮೆಟ್ರೋಗೆ ಸಾಕಷ್ಟು ಬಂಡವಾಳ ಹೂಡಿಕೆ ಮಾಡಲಾಗಿದೆ. ಮೆಟ್ರೋ ಸಿಬ್ಬಂದಿ ವೇತನ, ಇತ್ಯಾದಿ ವಿಚಾರಗಳನ್ನೂ ದರ ಏರಿಕೆ ವೇಳೆ ಗಣನೆಗೆ ತೆಗೆದುಕೊಳ್ಳಲಾಗಿದೆ. ಅದರಂತೆಯೇ ದರ ನಿಗದಿ ಸಮಿತಿ ಅಧ್ಯಯನ ನಡೆಸಿ ಮಾಡಿದ ಶಿಫಾರಸಿನ ಮೇರೆಗೆ ದರ ಹೆಚ್ಚಳ ಮಾಡಲಾಗಿದೆ. ದರ ಏರಿಕೆಗೆ ಪ್ರಯಾಣಿಕರ ವಿರೋಧ ಹಿನ್ನೆಲೆಯಲ್ಲಿ ಸಭೆ ಮಾಡಲಾಗಿದೆ. ಕಳೆದ 3 ದಿನಗಳಿಂದ ಬೋರ್ಡ್ ಜೊತೆ ಸಭೆ ನಡೆಸಿದ್ದೇವೆ. ಸಿಎಂ ಹಾಗೂ ಡಿಸಿಎಂ ಸೂಚನೆ ಮೇರೆಗೆ ಸಭೆ ಮಾಡಿದ್ದೇವೆ. ಎಲ್ಲಿ ಅನಿವಾರ್ಯವೋ ಅಲ್ಲಿ ದರ ಇಳಿಕೆ ಮಾಡಬೇಕಾಗುತ್ತದೆ.
ಯಾವ ನಿಲ್ದಾಣದಿಂದ ಯಾವ ನಿಲ್ದಾಣಕ್ಕೆ ದುಪ್ಪಟ್ಟು ದರ ಏರಿಕೆಯಾಗಿದೆಯೋ ಅಲ್ಲಿ ಕಡಿಮೆ ಮಾಡಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.