ನವದೆಹಲಿ 04: ಬಾಡಿ ಶೇಮಿಂಗ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಆಟಗಾರ ಸುನೀಲ್ ಗವಾಸ್ಕರ್, ಕ್ರಿಕೆಟ್‌ಗೆ ಮಾನಸಿಕ ಶಕ್ತಿ ಹೆಚ್ಚು ಮುಖ್ಯವಾಗಿರುತ್ತದೆ ಮತ್ತು ಆಟಗಾರನ ದೈಹಿಕ ರೂಪಕ್ಕೂ, ಇದಕ್ಕೂ ಯಾವುದೇ ಸಂಬಂಧವಿಲ್ಲ. ಫಿಟ್ನೆಸ್ ಆಯ್ಕೆಯ ಮೊದಲ ಮಾನದಂಡವಾಗಿದ್ದರೆ, ತಂಡದಲ್ಲಿ ಮಾಡೆಲ್‌ಗಳನ್ನು ಆಯ್ಕೆ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
'ನಾನು ಯಾವಾಗಲೂ ಅದನ್ನೇ ಹೇಳಿದ್ದೇನೆ, ನಿಮಗೆ ಸ್ಲಿಮ್ ಹುಡುಗರೇ ಬೇಕಾದರೆ, ನೀವು ಮಾಡೆಲಿಂಗ್ ಸ್ಪರ್ಧೆಗೆ ಹೋಗಿ. ಅಲ್ಲಿರುವ ಎಲ್ಲ ಮಾಡೆಲ್‌ಗಳನ್ನು ಆರಿಸಿಕೊಳ್ಳಿ. ಆದರೆ, ಇದು ಆ ರೀತಿಯ ಆಯ್ಕೆಯಲ್ಲ' ಎಂದಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರೆ ಶಮಾ ಮೊಹಮ್ಮದ್ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, 'ಕ್ರೀಡಾಪಟುವಾಗಿ ರೋಹಿತ್ ಶರ್ಮಾ ಅವರ ದೇಹತೂಕ ಹೆಚ್ಚಾಗಿದೆ. ಅವರು ತೂಕವನ್ನು ಇಳಿಸಬೇಕಾಗಿದೆ ಮತ್ತು ಸಹಜವಾಗಿ ಅವರು ಭಾರತ ಕಂಡ ಅತ್ಯಂತ ಪ್ರಭಾವಶಾಲಿಯಲ್ಲದ ನಾಯಕ!' ಎಂದು ಬರೆದಿದ್ದರು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಅವರು ಪೋಸ್ಟ್ ಅನ್ನು ಅಳಿಸಿದ್ದರು.
'ನೀವು ಎಷ್ಟು ಚೆನ್ನಾಗಿ ಕ್ರಿಕೆಟ್ ಆಡುತ್ತೀರಿ ಎಂಬುದಾಗಿದೆ. ನಾವು ಸರ್ಫರಾಜ್ ಖಾನ್ ಬಗ್ಗೆ ಮಾತನಾಡಿದ್ದೇವೆ. ಅವರನ್ನು ಕೂಡ ದೇಹದ ತೂಕದ ಬಗ್ಗೆ ಬಹಳ ಸಮಯದಿಂದ ನಿಂದಿಸಲಾಯಿತು. ಆದರೆ, ಅವರು ಟೆಸ್ಟ್ ಪಂದ್ಯದಲ್ಲಿ ಭಾರತಕ್ಕಾಗಿ 150 ರನ್ ಗಳಿಸಿದರೆ ಮತ್ತು ಇನ್ನೂ ಎರಡು ಅಥವಾ ಮೂರು ಪಂದ್ಯಗಳಲ್ಲಿ ಐವತ್ತು ಪ್ಲಸ್ ರನ್ ಗಳಿಸಿದರೆ, ಸಮಸ್ಯೆ ಏನು? ದೇಹದ ಗಾತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಾನು ಭಾವಿಸುತ್ತೇನೆ. ಇದು ಆಟಗಾರನ ಮಾನಸಿಕ ಶಕ್ತಿಗೆ ಸಂಬಂಧಿಸಿದ್ದಾಗಿದೆ. ಚೆನ್ನಾಗಿ ಬ್ಯಾಟ್ ಮಾಡಿ, ದೀರ್ಘಕಾಲ ಬ್ಯಾಟ್ ಮಾಡಿ ಮತ್ತು ರನ್ ಗಳಿಸುವುದು ಮುಖ್ಯವಾಗಿದೆ' ಎಂದು ತಿಳಿಸಿದರು.
ಮತ್ತೊಂದು ಪೋಸ್ಟ್‌ನಲ್ಲಿ ಶಮಾ, 'ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ಕಪಿಲ್ ದೇವ್, ರವಿಶಾಸ್ತ್ರಿ ಮತ್ತು ಉಳಿದ ನಾಯಕರಿಗೆ ಹೋಲಿಸಿದರೆ ರೋಹಿತ್ ಶರ್ಮಾ ಅವರಲ್ಲಿ ಇರುವ ವಿಶೇಷ ಗುಣ ಯಾವುದು? ಎಂದು ಪ್ರಶ್ನಿಸಿದ್ದರು. ಇದು ಬಿಜೆಪಿ ನಾಯಕರು ಸೇರಿದಂತೆ ಎಲ್ಲೆಡೆ ಟೀಕೆಗೆ ಗುರಿಯಾಗಿತ್ತು.