ಈಜುಕೊಳದಲ್ಲಿ ಮೃತಪಟ್ಟ ಬಾಲಕ ಕುಟುಂಬಕ್ಕೆ ಸಾಂತ್ವನ ಘಟನಾ ಸ್ಥಳಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಭೇಟಿ: ಪರೀಶೀಲನೆ

Members of the State Commission for Protection of Child Rights visit the scene of the incident to of

ಲೋಕದರ್ಶನ ವರದಿ 

ಈಜುಕೊಳದಲ್ಲಿ ಮೃತಪಟ್ಟ ಬಾಲಕ ಕುಟುಂಬಕ್ಕೆ ಸಾಂತ್ವನ   ಘಟನಾ ಸ್ಥಳಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಭೇಟಿ: ಪರೀಶೀಲನೆ 

ಕೊಪ್ಪಳ  28:  ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳದಲ್ಲಿ ಈಜಾಡಲೆಂದು ತೆರಳಿ ಓರ್ವ ಬಾಲಕ ಮೃತರಾದ ಘಟನೆಯು ಶನಿವಾರದಂದು ವರದಿಯಾದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಜಿ. ರಾಮತ್ನಾಳ ಅವರು ಸೋಮವಾರದಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿದರು ಹಾಗೂ ಬಾಲಕನ ಮನೆಗೆ ತೆರಳಿ ನೊಂದ ಪಾಲಕರನ್ನು ಭೇಟಿಯಾಗಿ ಸಾಂತ್ವನವನ್ನು ಹೇಳಿದರು.  

ಏ. 26 ರಂದು ಕೊಪ್ಪಳ ನಗರದಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಈಜಾಡಲೆಂದು ತೆರಳಿದ ಇಂದರಗಿ ಗ್ರಾಮದ ಇಂದ್ರೇಶ ತಂದೆ ರಾಮಣ್ಣ ಈಳಿಗೇರ್ ಎಂಬ 17 ವರ್ಷದ ಬಾಲಕ ಈಜುಕೊಳದಲ್ಲಿ ಮೇಲಿಂದ ಜಿಗಿದದ್ದು, ಮೇಲೇಳದೆ ಮೃತಪಟ್ಟ ಘಟನೆಯು ವರದಿಯಾಗಿರುತ್ತದೆ. ಈ ಕುರಿತು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಏ. 26 ರಂದು ಯು.ಡಿ.ಆರ್‌. ನಂ: 11/2025ರಲ್ಲಿ ಪ್ರಕರಣವು ದಾಖಲಾಗಿರುತ್ತದೆ. ಈ ಬಾಲಕ ಮೃತಪಟ್ಟ ಜಿಲ್ಲಾ ಕ್ರೀಡಾಂಗಣಲ್ಲಿರುವ ಈಜು ಕೊಳ್ಳಕ್ಕೆ ಭೇಟಿ ನೀಡಿ ಪರೀಶೀಲಿಸಿದರು.  

ಬೇಸಿಗೆ ರಜೆ ಅವಧಿ ಇರುವುದರಿಂದ ಸಾಕಷ್ಟು ಮಕ್ಕಳು ಈಜು ಕಲಿಯಲು ಆಗಮಿಸುತ್ತಾರೆ. ಎಲ್ಲರಿಗೂ ಉತ್ತಮ ಗುಣಮಟ್ಟದ ಜೀವ ರಕ್ಷಕ ಉಡುಗೆ(ಲೈಪ್ ಜಾಕೆಟ್), ಸಾಕಷ್ಟು ಸಂಖ್ಯೆಯಲ್ಲಿ ಜೀವ ರಕ್ಷಕ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವುದು, ಈಜು ಕೊಳದಲ್ಲಿ ಗದ್ದಲವಾಗದಂತೆ ಮುನ್ನೆಚ್ಚರಿಕೆ ಕ್ರಮ ಹಾಗೂ ಒಂದು ಅವಧಿಗೆ ನಿರ್ದಿಷ್ಟಪಡಿಸಿದ ಸಂಖ್ಯೆಯಲ್ಲಿ ಜನರನ್ನು ಒಳಬಿಡುವುದು, ತುರ್ತು ಸಂದರ್ಭಕ್ಕಾಗಿ ತುರ್ತು ಸೇವಾ ವಾಹನವನ್ನು ಸ್ಥಳದಲ್ಲಿ ಸೇವೆಗಾಗಿ ಲಭ್ಯವಿರುವಂತೆ ನೋಡಿಕೊಳ್ಳಲು ಸೂಚನೆ ನೀಡಿ, ಬಾಲಕನ ಸಾವಿಗೆ ಇಲಾಖೆಯ ಸಿಬ್ಬಂದಿಗಳ ನಿರ್ಲಕ್ಷ್ಯತನವಿದೆಯೇ ಎಂಬುದರ ಬಗ್ಗೆಯು ತನಿಖೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.  

ನಂತರ ಇಂದರಗಿ ಗ್ರಾಮಕ್ಕೆ ತೆರಳಿ ಮೃತ ಬಾಲಕನ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವಾನವನ್ನು ತಿಳಿಸಿ, ಮುಖ್ಯಮಂತ್ರಿಗಳ ಪರಿಹಾರ ಧನ ಯೋಜನೆಯಡಿಯಲ್ಲಿ ಕುಟುಂಬಕ್ಕೆ ಪರಿಹಾರ ಧನವನ್ನು ನೀಡಲು ಕ್ರಮವಹಿಸುವಂತೆ ಕೊಪ್ಪಳ ತಹಶೀಲ್ದಾರರಿಗೆ ದೂರವಾಣಿ ಕರೆಯ ಮೂಲಕ ಸೂಚಿಸಿದರು.  

ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ಕೊಪ್ಪಳ ಯುವ ಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ್, ಕೊಪ್ಪಳ ನಗರ ಪೊಲೀಸ್ ಠಾಣೆಯ ಅರಕ್ಷಕ ನೀರೀಕ್ಷಕರಾದ ಜಯಪ್ರಕಾಶ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಸೇರಿದಂತೆ ಯುವಜನ ಮತ್ತು ಕ್ರೀಡಾ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.