ಬ್ಯಾಡಗಿ 31: ತಾಲೂಕಿನ ಕುಮ್ಮೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಸರಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸುವ ನಿಟ್ಟಿನಲ್ಲಿ ಗ್ರಾ.ಪಂನಿಂದ ಹೊಸ ಚಿಂತನೆಯೊಂದು ರೂಪುಗೊಳಿಸಿ ಅದನ್ನು ಕಾರ್ಯರೂಪಕ್ಕೆ ತರಲು ಉದ್ದೇಶಿಸಿದ್ದು, ಇದಕ್ಕೆ ಎಲ್ಲಾ ಶಾಲೆಯವರು ಸಹಕಾರ ನೀಡಬೇಕೆಂದು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ನೀಲಪ್ಪ ಕಜ್ಜರಿ ಹೇಳಿದರು.
ಅವರು ಸ್ಥಳೀಯ ಪ್ರಭಾವತಿ ಫಾಸಿ ಸರಕಾರಿ ಪ್ರೌಢ ಶಾಲೆಯಲ್ಲಿ ಜರುಗಿದ ಗ್ರಾ.ಪಂ.ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು. ಇತೀಚಿನ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಪ್ರಮಾಣ ಬಹಳಷ್ಟು ಕಡಿಮೆಯಾಗುತ್ತಲಿದೆ. ಇದನ್ನು ತಡೆಗಟ್ಟಿ ಮಕ್ಕಳ ಹಾಜರಾತಿ ಪ್ರಮಾಣವನ್ನು ಹೆಚ್ಚಿಸಲು ಗ್ರಾ.ಪಂನಿಂದ ಹೊಸ ಚಿಂತನೆಯೊಂದು ಯೋಜಿಸಲಾಗಿದೆ. ಅದರಲ್ಲಿ ಶಿಕ್ಷಕರ ಭೋಧನಾ ಗುಣಮಟ್ಟ, ಅವರ ವಿದ್ಯಾರ್ಹತೆ ವಿವರ ಹಾಗೂ ಸರಕಾರದ ಜಾರಿಯಲ್ಲಿರುವ ಶೈಕ್ಷಣಿಕ ಯೋಜನೆಗಳ ಸಮಗ್ರ ಮಾಹಿತಿಯನ್ನು ಒಳಗೊಂಡ ಮಾಹಿತಿ ಪುಸ್ತಕವನ್ನು ತಯಾರಿಸಿ ಗ್ರಾ.ಪಂ.ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಕುಟುಂಬಕ್ಕೂ ತಲುಪಿಸುವ ಮೂಲಕ ಪಾಲಕರಲ್ಲಿ ಸರಕಾರಿ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸಿ ಸರಕಾರಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಮುಂದೆ ಬರುವಂತೆ ಮಾಡಲು ಯೋಜಿಸಲಾಗಿದೆ. ಇದಕ್ಕೆ ಎಲ್ಲ ಶಾಲೆಗಳ ಶಿಕ್ಷಕರು ಹಾಗೂ ಎಸ್ಡಿಎಂಸಿ ಅವರು ಸಹಕಾರ ನೀಡಿದರೆ ಯಶಸ್ಸು ಸಿದ್ಧವೆಂದು ತಿಳಿಸಿದರು.
ಗ್ರಾ.ಪಂ ವ್ಯಾಪ್ತಿಯಲ್ಲಿರುವ ಎಲ್ಲ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ 14ನೇ ಹಣಕಾಸು ಯೋಜನೆಯಡಿ ಪ್ರತಿ ಶಾಲೆಗೆ 27 ಸಾವಿರದಂತೆ 5 ಶಾಲೆಗಳಿಗೆ 1.35 ಲಕ್ಷ ರೂ.ಗಳ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ, ಕಡ್ಡಾಯ ಶೌಚಾಲಯ ಬಳಕೆಗೆ ಅನುಕೂಲವಾಗುವಂತೆ ಅನುದಾನವನ್ನು ಬಳಸಲು ತೀರ್ಮಾನಿಸಲಾಗಿದೆ ಎಂದು ಸಭೆಗೆ ಹೇಳಿದರು.
ಪೋಲಿಸ್ ಇಲಾಖೆಯ ಅಶೋಕ ಕೊಂಡ್ಲಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಹಾಗೂ ಮಕ್ಕಳ ಕಳ್ಳ ಸಾಗಾಟ ಮತ್ತು ಬಾಲ್ಯವಿವಾಹದಂತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಗ್ರಾ.ಪಂ.ವ್ಯಾಪ್ತಿಯಲ್ಲಿ ಇಂತಹ ಪ್ರಕರಣಗಳು ಕಂಡು ಬಂದರೆ ಅದರಲ್ಲೂ ಅಪರಿಚಿತ ವ್ಯಕ್ತಿಗಳು ಆಮಿಷಗಳನ್ನು ಒಡ್ಡುವ ಮೂಲಕ ವಂಚಿಸುವ ಪ್ರಕರಣಗಳು ಕಂಡು ಬಂದರೆ ಪೋಲಿಸ್ ಕಂಟ್ರೋಲ್ ರೂಮ್ ನಂಬರ 100, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಂಬರ 198 ನಂಬರಗಳಿಗೆ ಸಂಪರ್ಕಿಸಿ ದೂರು ನೀಡುವಂತೆ ತಿಳಿಸಿದರು. ಅಲ್ಲದೇ ಹಿರಿಯ ನಾಗರಿಕರಿಗೆ ಅನ್ಯಾಯವಾದಾಗ 1090 ನಂಬರಿಗೆ ಸಂಪಕರ್ಿಸಿ ದೂರು ಸಲ್ಲಿಸುವಂತೆ ಸಭೆಯ ಮೂಲಕ ಕೋರಿದರು.
ಸಿಡಿಪಿಓ ರಾಮಲಿಂಗಪ್ಪ ಮಾತನಾಡಿ 6 ವರ್ಷದ ಒಳಗಿನ ಮಕ್ಕಳಿಗೆ ಅನೌಪಚಾರಿಕೆ ಶಿಕ್ಷಣ ವ್ಯವಸ್ಥೆ ಉತ್ತಮವಾಗಬೇಕು. ಯಾವುದೇ ಕಾರಣಕ್ಕೂ ಮಕ್ಕಳಿಗೆ ಈ ಅವಧಿಯಲ್ಲಿ ಕಡ್ಡಾಯ ಶಿಕ್ಷಣ ನೀಡುವುದು ಸೂಕ್ತವಲ್ಲ. ಇದರಿಂದ ಮಕ್ಕಳ ಬಾಲ್ಯದ ಚಟುವಟಿಕೆಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದಾಗಿದೆ. ಪಾಲಕರು ಸಹ 6 ವರ್ಷದವರೆಗೆ ಮಕ್ಕಳಿಗೆ ಕಡ್ಡಾಯ ಶಿಕ್ಷಣ ವ್ಯವಸ್ಥೆಗೆ ದೂಡುವುದನ್ನು ಕೈ ಬಿಡಬೇಕು. ಸರಕಾರವು ಅಂಗನವಾಡಿಗಳಲ್ಲಿ ಪ್ರತಿ ಮಗುವಿಗೆ 8 ರೂ.ಗಳನ್ನು ಖರ್ಚು ಮಾಡುತ್ತಲಿದೆ. ಮಕ್ಕಳು ಅಂಗನವಾಡಿಗಳಲ್ಲಿ ಅನೌಪಚಾರಿಕಾ ಶಿಕ್ಷಣದ ಮೂಲಕ ಬಾಲ್ಯದ ಚಟುವಟಿಕೆಗಳನ್ನು ಸವಿಯ ಬಹುದೆಂದರಲ್ಲದೇ ಅಂಗನವಾಡಿಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಗ್ರಾ.ಪಂ.ಮುಂದಾಗಬೇಕು. ಇಲಾಖೆಯಲ್ಲಿ ಅನುದಾನದ ಕೊರತೆ ಇರುವ ಕಾರಣ ಸ್ಥಳೀಯ ಸಂಸ್ಥೆಯೇ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಕೊಳ್ಳಬೇಕೆಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷೆ ಲಲಿತವ್ವ ಲಮಾಣಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ಮುಂದಿನ ಕೆಡಿಪಿ ಸಭೆಗಳಿಗೆ ಸಮರ್ಪಕ ಮಾಹಿತಿಯೊಂದಿಗೆ ವರದಿ ಸಲ್ಲಿಸುವಂತೆ ತಿಳಿಸಿದರು. ಸಭೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಬಸವಣ್ಣೆವ್ವ ಮೋಟೆವ್ವನವರ, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಅಶೋಕ ಹಿರೇಹಳ್ಳಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಗ್ರಾ.ಪಂ.ಕಾರ್ಯದರ್ಶಿ ವೀರಣ್ಣ ತಳವಾರ ಸ್ವಾಗತಿಸಿದರು. ಎಚ್.ವೆಂಕಟೇಶ ವಂದಿಸಿದರು.
ಬ್ಯಾಡಗಿ ತಾಲೂಕಿನ ಕುಮ್ಮೂರ ಗ್ರಾಮದಲ್ಲಿ ನಡೆದ ಗ್ರಾ.ಪಂ.ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಪಿಡಿಓ ನೀಲಪ್ಪ ಕಜ್ಜರಿ,