ರಾಷ್ಟ್ರೀಯ ಪಲ್ಸ್ ಪೋಲಿಯೊ ಜಾಗೃತಿ ಜಾಥಾಗೆ ಮೇಯರ್ ಚಾಲನೆ

ಬೆಂಗಳೂರು, ಜ 17,ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ ಪಲ್ಸ್ ಪೋಲಿಯೊ ಅಂಗವಾಗಿ ಬಿಬಿಎಂಪಿಯಿಂದ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾಗೆ ಮೇಯರ್ ಎಂ. ಗೌತಮ್ ಕುಮಾರ್ ಚಾಲನೆ ನೀಡಿದರು. ಜನ ಜಾಗೃತಿ ಜಾಥಾ ಪಾಲಿಕೆ ಕೇಂದ್ರ ಕಛೇರಿ ಆವರಣದಿಂದ ಹೊರಟು ಹಡ್ಸನ್ ವೃತ್ತ, ಬಳಿಕ ಮಿಷನ್ ರೋಡ್ ಮೂಲಕ ಸಂಪಂಗಿರಾಮನಗರ ಗಲ್ಲಿಯ ಒಳ ಭಾಗದಿಂದ ರಾಜಾರಾಮ್ ಮೋಹಮ್ ರಾಯ್ ರಸ್ತೆ ಮುಖಾಂತರ ಪಾಲಿಕೆ ಕೇಂದ್ರ ಕಛೇರಿವರೆಗೆ ಬಂದು ಸಂಪನ್ನಗೊಂಡಿತು. ಜಾಥಾ ವೇಳೆ ಮಕ್ಕಳ ಪೋಷಕರಿಗೆ ಕಡ್ಡಾಯವಾಗಿ ಐದು ವರ್ಷದವರೆಗೆ ಪಲ್ಸ್ ಪೋಲಿಯೊ ಲಸಿಕೆ ಹಾಕಿಸುವಂತೆ ಮಹಾಪೌರರು ಹಾಗೂ ಆಯುಕ್ತರು ಮನವಿ ಮಾಡಿದರು.ಈ ವೇಳೆ ಬಿಬಿಎಂಪಿ ಪ್ರತಿಪಕ್ಷ ಪಕ್ಷ ನಾಯಕ ಅಬ್ದುಲ್ ವಾಜೀದ್, ಸ್ಥಳೀಯ ಪಾಲಿಕೆ ಸದಸ್ಯ ವಸಂತ ಕುಮಾರ್, ವಿಶೇಷ ಆಯುಕ್ತರು(ಆರೋಗ್ಯ) ಡಾ. ರವಿಕುಮಾರ್ ಸುರಪುರ, ವಿಶೇಷ ಆಯುಕ್ತರು(ಶಿಕ್ಷಣ) ವೃಷಬೇಂದ್ರ ಸ್ವಾಮಿ, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ, ರೋಟರಿ ಕ್ಲಬ್ ಪದಾಧಿಕಾರಿಗಳು, ಆಶಾ ಕಾರ್ಯಕರ್ತೆರು, ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.