ಇಂದೋರ್, ನ 15 : ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದ ಎರಡನೇ ದಿನ ಪ್ರಥಮ ಇನಿಂಗ್ಸ್ ನಲ್ಲಿ ಭಾರತದ ಆರಂಭಿಕ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ವೃತ್ತಿ ಜೀವನದ ಮೂರನೇ ಶತಕ ಸಿಡಿಸಿದರು.
ಕಳೆದ ನಾಲ್ಕು ಪಂದ್ಯಗಳಿಂದ ಅವರ ಮೂರನೇ ಶತಕ ಇದಾಯಿತು. ಅಲ್ಲದೆ, ಆಡಿರುವ ಎಂಟು ಟೆಸ್ಟ್ ಪಂದ್ಯಗಳಿಂದ 700 ಕ್ಕೂ ಹೆಚ್ಚು ರನ್ ಪೂರೈಸಿದರು. ಪ್ರಥಮ ಇನಿಂಗ್ಸ್ ಮುಂದುವರಿಸಿದ್ದ ಭಾರತ ಮೊದಲನೇ ವಿಕೆಟ್ ಬಹುಬೇಗ ಕಳೆದುಕೊಂಡಿತು. ಆದರೂ, ಮಯಾಂಕ್, ಪೂಜಾರ ಜತೆಗೂಡಿ ಎರಡನೇ ವಿಕೆಟ್ಗೆ 91 ರನ್ ದಾಖಲಿಸಿದ್ದರು. ಜತೆಗೆ, ಅಜಿಂಕ್ಯಾ ರಹಾನೆ ಜತೆ ಮತ್ತೊಂದು ಅದ್ಭುತ ಜತೆಯಾಟ ಸೃಷ್ಟಿಸಿದರು. ಇವರ ಶತಕದಲ್ಲಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ಒಳಗೊಂಡಿದೆ.
ಎರಡನೇ ದಿನ ಮಧ್ಯಾಹ್ನ ಭೋಜನ ವಿರಾಮದ ವೇಳೆಗೆ ಮಯಾಂಕ್ 91 ರನ್ ಗಳಿಸಿದ್ದರು. ನಂತರ ಎರಡನೇ ಅವಧಿಯಲ್ಲಿ ಬಹುಬೇಗ ಶತಕ ಪೂರೈಸಿದರು. ಬಾಂಗ್ಲಾದೇಶ ವಿರುದ್ಧ ಭಾರತ ಜಯ ಸಾಧಿಸಿ ತವರು ನೆಲದಲ್ಲಿ ಸತತ 12 ಟೆಸ್ಟ್ ಪಂದ್ಯ ಗೆದ್ದು ಸಾಧನೆ ಮಾಡಲಿದೆ.
ಮೊದಲನೇ ದಿನ ಬಾಂಗ್ಲಾದೇಶವನ್ನು 150 ರನ್ ಗಳಿಗೆ ಆಲೌಟ್ ಮಾಡಲಾಗಿತ್ತು. ಮೊಹಮ್ಮದ್ ಶಮಿ, ಉಮೇಶ್ ಯಾದವ್ ಹಾಗೂ ಇಶಾಂತ್ ಶರ್ಮಾ ಅತ್ಯುತ್ತಮ ಬೌಲಿಂಗ್ ಮಾಡಿದ್ದರು.
ಒಟ್ಟಾರೆ, ಭಾರತ ತಂಡ ಟೀ ವಿರಾಮದ ವೇಳೆಗೆ 84 ಓವರ್ ಗಳಿಗೆ ಮೂರು ವಿಕೆಟ್ ನಷ್ಟಕ್ಕೆ 303 ರನ್ ದಾಖಲಿಸಿದೆ. ಮಯಾಂಕ್ ಅಗರ್ವಾಲ್ ಅಜೇಯ 156 ಹಾಗೂ ಅಜಿಂಕ್ಯ ರಹಾನೆ ಅಜೇಯ 82 ರನ್ ಗಳಿಸಿದ್ದಾರೆ,