ಜೀವನ ಬಂಡಿಯಲ್ಲಿ ಅನೀರೀಕ್ಷಿತಗಳು ಸಹಜವಾಗಿ ಬರುತ್ತಿರಲಿ...

ಮನುಷ್ಯನ ಬದುಕು ಅನೀರೀಕ್ಷಿತಗಳ ಮೂಟೆ. ಯಾವ ಕ್ಷಣದಲ್ಲಿ ಏನಾಗುತ್ತದೆ ಎಂದು ಗೊತ್ತಿರುವುದೇ ಇಲ್ಲ. ಆ ಅನೀರೀಕ್ಷಿತಗಳಿಗಾಗಿ ಕಾದರೆ ಮಾತ್ರ ನಮಗೆ ಲಾಭ ಮತ್ತು ಖುಷಿ ಎರಡು ಸಿಗುತ್ತದೆ. ಇಲ್ಲವಾದಲ್ಲಿ ನಾವು ಅದೆಷ್ಟೋ ಒಳ್ಳೆಯ ಕ್ಷಣ ಮತ್ತು ಸಂಗತಿಗಳನ್ನು ಕಳೆದುಕೊಂಡು ಬಿಡುತ್ತೇವೆ. ಅನೀರೀಕ್ಷಿತಗಳು ಹೇಳಿಕೊಂಡು ಬರುವುದಿಲ್ಲವಲ್ಲ, ಹಾಗಾಗಿ ಕಾಯಬೇಕು. ಎಷ್ಟು ಗಂಟೆ, ಎಷ್ಟು ಕಾಲ ಎಷ್ಟು ವರ್ಷ ಎಂದು ಲೆಕ್ಕ ಇಡಲು ಸಾಧ್ಯವಿಲ್ಲ. ಅದರಲ್ಲೂ ನಮ್ಮ ಶ್ರಮ ಬಯಸುತ್ತದೆ. ನಮ್ಮ ಶ್ರಮದ ಮುಂದಿನ ದಿನಗಳು ನಮಗೆ ಹೊಸತೊಂದು ಗೊತ್ತಿಲ್ಲದೇ ಎದುರಾಗಿಬಿಡುತ್ತದೆ. ಆದರೆ ನಾನು ಇಷ್ಟು ಶ್ರಮವಹಿಸಿದರೂ ನನಗೆ ಸುಖವಿಲ್ಲ ಎಂದುಕೊಂಡು ವಿಮುಖರಾದರೆ ಅದಕ್ಕೆ ಫಲ ಸಿಗುವುದೇ ಇಲ್ಲ. ಆಗ ಜಗತ್ತು ನಶ್ವರ ಎನ್ನಿಸಲು ಆರಂಭವಾಗುತ್ತದೆ. ನಾವು ಅಪ್ರಯೋಜಕರು, ನಮ್ಮಿಂದ ಏನೂ ಸಾಧ್ಯವಿಲ್ಲ ಎನ್ನಿಸಲು ಶುರುವಾಗುತ್ತದೆ. ಪ್ರೋತ್ಸಾಹ ಎನ್ನುವುದು ಎಷ್ಟು ಮುಖ್ಯವೋ ಅಷ್ಟೆ ಜೀವನದಲ್ಲಿ ಅನೀರೀಕ್ಷಿತಗಳು ಸಹ ಮುಖ್ಯ. ಪ್ರೋತ್ಸಾಹ ಸುಖಾಸುಮ್ಮನೆ ಸಿಕ್ಕಿ ಬಿಡುವುದಿಲ್ಲ. ಇಂಥದ್ದೊಂದು ಕೆಲಸ ನಾವು ಮಾಡುತ್ತೇವೆ ಎಂದು ಪ್ರಸ್ತುತ ಪಡಿಸಿದರೆ ಮಾತ್ರ ಪ್ರೋತ್ಸಾಹಿಸುವ ಕೈಗಳು ಸಿಗುತ್ತವೆ. 

ಅವಳಿ ಜವಳಿ ಮಕ್ಕಳಿಬ್ಬರು ಉನ್ನತ ಶಿಕ್ಷಣ ಕಲಿತವರು. ತಮ್ಮನಿಗಿಂತ ಅಣ್ಣ ಮತ್ತೂ ಹೆಚ್ಚಿಗೆ ಕಲಿತವನು. ಇಬ್ಬರೂ ತುಂಬಾ ಅನ್ಯೋನ್ಯವಾಗಿ ಇದ್ದವರು. ರಾಮ ಲಕ್ಷ್ಮಣ ಎಂದೆ ಹೆಸರು ಪಡೆದವರು. ಇಂಥ ಚೆಂದದ ಬಾಂದವ್ಯದಲ್ಲಿದ್ದ ಅಣ್ಣ ನೇಣಿಗೆ ಶರಣಾದ ಅಂದರೆ ನಂಬಲು ಸಾಧ್ಯವೆ. ಆದರೆ ಈ ಘಟನೆ ನಡೆದಿದೆ. ಅಣ್ಣನಿಗೆ ಒಂದು ಕಂಪನಿಯಲ್ಲಿ ಕೆಲಸ ಸಿಕ್ಕಿತು.  ಒಂದು ತಿಂಗಳ ಕೆಲಸಕ್ಕೆ ಹೋದ. ತನ್ನ ಓದಿಗೆ ಸಂಬಳ ಕಡಿಮೆ ಇದೆ ಎಂದು ಗೊತ್ತಿದ್ದುದರಿಂದ ಬೇರೆ ಕಂಪನಿಗಳಿಗೂ ಇಂಟರ್‌ವ್ಯೂ ನೀಡಿದ್ದ. ತಮ್ಮನಿಗೆ ಇನ್ನೂ ಕೆಲಸವಿಲ್ಲದೆ ಮನೆಯಲ್ಲಿ ಉಳಿದಿದ್ದ. ಕೆಲಸಕ್ಕಾಗಿ ಕಾದ. ಮೂರು ತಿಂಗಳಾದರೂ ಕೆಲಸ ಸಿಗಲಿಲ್ಲ. ಅಣ್ಣನ ಸಂಬಳದಲ್ಲಿಯೇ ಬೆಂಗಳೂರು ಸಿಟಿಯಲ್ಲಿ ಇಬ್ಬರೂ ಉಳಿದರು. ತಮ್ಮನಿಗೂ ದೊಡ್ಡ ಕಂಪನಿಯಲ್ಲಿ ಕೆಲಸ ಸಿಕ್ಕಿತು. ಅಣ್ಣನ ಮೂರು ಪಟ್ಟು ಸಂಬಳ. ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ತಮ್ಮನಿಗೆ ಕೆಲಸ ಸಿಕ್ಕ ಮೇಲೆ ಒಮ್ಮೆ ಅಣ್ಣತಮ್ಮ ಇಬ್ಬರೂ ತಮ್ಮ ಹಳ್ಳಿಗೆ ಬಂದರು. ಹಳ್ಳಿಯಲ್ಲಿ ಯಾರದೋ ಮಾತು ಅಣ್ಣನಿಗಿಂತ ತಮ್ಮನ ಸಂಬಳ ಹೆಚ್ಚಂತೆ. ಅಣ್ಣ ಜಾಸ್ತಿ ಕಲಿತು ಪ್ರಯೋಜನ ಏನು ಅಂತ. ಈ ಮಾತಿಗೆ ಕಿವಿಕೊಡುವ ಅವಶ್ಯಕತೆಯೇ ಇರಲಿಲ್ಲ. ಆದರೆ ಆತ ಅದಕ್ಕೆ ಕಿವಿ ಕೊಟ್ಟುಬಿಟ್ಟ. ತಮ್ಮನಿಗೆ ಸಿಕ್ಕ ಕೆಲಸ ತನಗೆ ಸಿಗಲಿಲ್ಲ ಎಂದು ತನ್ನೊಳಗೆ ನೊಂದುಕೊಂಡು ಒಂದು ರಾತ್ರಿ ಊರಿನಲ್ಲಿ ಇರುವಾಗಲೇ ನೇಣಿಗೆ ಶರಣಾದ. ಆತ ಸತ್ತುಹೋಗಿ ಶವಕ್ಕೆ ಬೆಂಕಿ ಹಚ್ಚಿ ಮನೆಗೆ ಬರುವಷ್ಟರಲ್ಲಿ ಒಂದು ಲೆಟರ್ ಬಂದಿತ್ತು. ಅವನಿಗೂ ತಮ್ಮನಿಗಿಂತ ದೊಡ್ಡ ನೌಕರಿ ಸಿಕ್ಕಿತ್ತು. ಆ ಕಂಪನಿಯಲ್ಲಿ ನೌಕರಿ ಸಿಗುವುದು ಕಷ್ಟವೆಂದು ಗೊತ್ತಿತ್ತು. ಆದರೆ ಅನೀರಿಕ್ಷಿತವಾಗಿ ಅವನ ಸ್ನೇಹಿತನ ಕಡೆಯಿಂದ ಅವನಿಗೆ ಸಿಕ್ಕ ಆ ನೌಕರಿಯನ್ನು ಮಾಡಲು ಅಣ್ಣ ಬದುಕಿಯೇ ಇರಲಿಲ್ಲ. 

ಒಂದಷ್ಟು ಕಾಲ ಕಾಯಬೇಕಿತ್ತು ಅನ್ನಿಸುವುದಿಲ್ಲವೆ. ಕಾದಿದ್ದರೆ ಒಳ್ಳೆಯ ದಿನಗಳು ಇದ್ದವು ಅಲ್ಲವೆ. ಅಷ್ಟಕ್ಕೂ ಅದೆಷ್ಟು ಜನ ಹೊಟ್ಟೆಗೂ ಇಲ್ಲದೇ ಬದುಕುತ್ತಿರುವಾಗ ಇಂಥ ಸಣ್ಣಸಣ್ಣ ವಿಚಾರಕ್ಕೆ ನಮ್ಮನ್ನು ಬಲಿಕೊಟ್ಟುಕೊವುದು ನಿಜವಾಗಿ ಆ ವ್ಯಕ್ತಿಯ ಸೋಲು. ಗೆಲ್ಲ ಬೇಕಾದ ವೇಳೆಯಲ್ಲಿ ಸೋತು ಹೋಗುವುದು ಯಾವ ತಂದೆ-ತಾಯಿಯೂ ಸಹಿಸುವುದಿಲ್ಲ. ದುರಂತ ತಂದುಕೊಳ್ಳುವುದಕ್ಕಿಂತ ಕಾಯುವಿಕೆಗೆ ಹೆಚ್ಚಿನ ಮಹತ್ವ ಕೊಡುವುದು ಎಲ್ಲದಕ್ಕೂ ಕ್ಷೇಮ. 

ನಮಗೆಲ್ಲ ಆ ಕ್ಷಣ ನಮ್ಮ ಕೈಗೆ ಸಿಕ್ಕಿ ಬಿಡಬೇಕು. ಧಾವಂತವೇ ನಮ್ಮನ್ನು ಕಬಳಿಸುವುದು. ಈ ಕ್ಷಣದಲ್ಲಿ ನಮಗೆ ಹೆಸರು, ಶ್ರೇಯಸ್ಸು, ಗಳಿಕೆ ಎಲ್ಲವೂ ಆಗಿಬಿಡಬೇಕು. ಒಂದು ಕವನ ಬರೆದು ಅದು ಫೇಸ್‌ಬುಕ್‌ನಲ್ಲಿ ಬಿಟ್ಟರೆ ಆ ಕ್ಷಣಕ್ಕೆ ಸಿಗುವ ಕಮೆಂಟ್‌ಗಳೆ ಬಂಡುವಾಳ. ಅದರಲ್ಲಿ ತಿದ್ದಬಹುದಾದ ಅಂಶಗಳಿದ್ದರೂ ಅದರತ್ತ ಗಮನವಿಲ್ಲ. ಅದನ್ನು ಒಂದಷ್ಟು ಕಾಲ ನಮ್ಮೊಟ್ಟಿಗೆ ಇಟ್ಟುಕೊಂಡು ಪದೆಪದೆ ಓದಿ ಸಂಭ್ರಮಿಸುವ, ಅನುಭವಿಸುವ ಮನಸ್ಸಿಲ್ಲ. ಎಲ್ಲವೂ ಅಗಿಂದ ಆಗಲೇ ನಡೆದು ಉತ್ತುಂಗಕ್ಕೆ ಏರಿ ಬಿಡಬೇಕು ಎನ್ನುವ ದಾವಂತ ಮಾತ್ರ ಇದೆ. ಆ ದಾವಂತವೇ ನಮಗೆ ಕಾಯಲು ಹಚ್ಚುವುದಿಲ್ಲ. ಕಾಯುವುದಿಲ್ಲ ಎಂದರೆ ಎಂದಾದರೂ ಬರುವ ಅನೀರೀಕ್ಷಿತ ಗೆಲುವು ನಮಗೆ ಸಿಗುವುದೇ! ಇಲ್ಲಿ ಆಲಸ್ಯ ಬೇರೆ, ಕಾಯುವುದು ಬೇರೆ. ಎರಡನ್ನು ಒಟ್ಟೊಟ್ಟಿಗೆ ಸೇರಿಸಿಕೊಳ್ಳಬೇಡಿ.  

ಎಮೋಷನ್ಸ್‌ ಅತೀ ಆಗಬಾರದು. ಮನುಷ್ಯ ಸ್ಥಿತಪ್ರಜ್ಞನಾಗಿರಬೇಕು. ಅಂದರೆ ಸೋಲು ಗೆಲುವು ಎರಡು ಕಡೆ ಒಂದೇ ರೀತಿಯಾದ ಪ್ರತಿಕ್ರಿಯೆ ಇರಬೇಕು. ಅಂಥವನಿಗೆ ಕೆಲವು ಆಕಸ್ಮಿಕಗಳು ಬೇಗ ಬೇಗ ಸಿಗುತ್ತವೆ ಎನ್ನುವ ಮಾತಿದೆ. ನಮ್ಮದೆಲ್ಲ ಹಣದ ಮೇಲಿನ ಜೀವನ ಎನ್ನುವಂತೆ ಆಗಿಬಿಟ್ಟಿದೆ. ಕೆಲವು ಬಾರಿ ಅನೀರೀಕ್ಷಿತ ಸಂದರ್ಭ ಎನ್ನುವದು ನಮ್ಮನ್ನು ಮೇಲಕ್ಕೂ ಒಯ್ಯುವುದು ಅಥವಾ ಪಾತಾಳಕ್ಕೂ ನೂಕಿ ಬಿಡುವುದು. ಅವೇರಡನ್ನು ಏಕರೀತಿಯಲ್ಲಿ ಎದುರಿಸಿ ನಿಲ್ಲುವದು ಕಲಿತರೆ ಬದುಕು ಸರಳ. ಭಾವನೆ ಬೇರೆ ವಾಸ್ತವ ಬೇರೆ. ಭಾವನೆಯನ್ನು ವಾಸ್ತವಕ್ಕೆ ತಂದುಕೊಳ್ಳುವ ಭರಾಟೆಯಲ್ಲಿ ಅದೆಷ್ಟು ಅಡೆತಡೆ, ಕಷ್ಟಗಳು ಇವೆ ಎನ್ನುವದು ಅರ್ಥವಾಗಬೇಕು. ಆ ಕಷ್ಟಕ್ಕೆ ಹೆದರಿದಾಗಲೇ ಆತ್ಮಹತ್ಯೆಯಂಥಹ ಯೋಚನೆ ಬರುವುದು.  

ಆಕೆಗೆ ಮಕ್ಕಳೇ ಆಗುವುದಿಲ್ಲ ಎಂದು ವೈದ್ಯತು ಹೇಳಿಬಿಟ್ಟಿದ್ದರು. ಮದುವೆಯಾಗಿ ಬರೋಬ್ಬರಿ ಹದಿನೆಂಟು ವರ್ಷ ಕಳೆದು ಹೋಗಿತ್ತು. ತನ್ನ ಬದುಕಿಗೆ ಮಕ್ಕಳಿಲ್ಲ ಎಂದು ಒಪ್ಪಿಕೊಂಡು ಆ ತಾಯಿ ಆ ವಿಚಾರವನ್ನೇ ಮರೆತುಬಿಟ್ಟಳು. ಅನಾಥಾಶ್ರಮ ಮಕ್ಕಳಿಗೆ ದಾನ, ವೃದ್ಧಾಶ್ರಮಕ್ಕೆ ದಾನ. ಬಡ ಮಕ್ಕಳಿಗೆ ಕಲಿಯಲು ಸಹಾಯ ಮಾಡುತ್ತಿದ್ದಳು. ಯಾರು ಏನೆಂದರೂ ತಲೆ ಕೆಡಿಸಿಕೊಳ್ಳದೆ ಗಂಡ ಹೆಂಡತಿ ಸಂತೋಷದಿಂದ ಬದುಕಿದ್ದರು. ಆದರೆ ಅವರ ಬದುಕಿನಲ್ಲಿ ಊಹಿಸಲಾರದ ಒಂದು ಸವಿ ಘಳಿಗೆ ಬಂದು ಬಿಟ್ಟಿತು. ಹದಿನೆಂಟು ವರ್ಷದ ನಂತರ ಅಂದರೆ ತನ್ನ ಮೂವತ್ತೊಂಬತ್ತನೇ ವಯಸ್ಸಿನಲ್ಲಿ ಬಸುರಿಯಾದಳು. ಈಗ ಆಕೆಯ ಮಡಿಲಲ್ಲಿ ಎರಡು ತಿಂಗಳದ ಹೆಣ್ಣು ಮಗು ಅರಳಿದೆ. ಇಂಥಹ ಅನೀರಿಕ್ಷಿತವೊಂದು ದೇವರು ತನ್ನ ಪಾಲಿಗೆ ಪಾಲಿಸುತ್ತಾನೆ ಎಂದುಕೊಂಡಿರಲಿಲ್ಲ. ಬಹುಶಹ ನಾನು ಯಾವುದೋ ಪುಣ್ಯ ಕೆಲಸ ಮಾಡಿದೆ. ಅದಕ್ಕೆ ದೇವರು ಪ್ರಸಾದ ಕರುಣಿಸಿದ ಎಂದು ಕಣ್ತುಂಬಿಕೊಂಡಳು ಆ ತಾಯಿ. 

ಬದುಕು ನಿಜಕ್ಕೂ ನಾವು ಎಣಿಸಿದಂತೆ ಇಲ್ಲವೇ ಇಲ್ಲ. ದಿನದಿಂದ ದಿನಕ್ಕೆ ಖಂಡಿತ ಬದಲಾಗುತ್ತದೆ. ಕೆಲವು ಬದಲಾವಣೆಗೆ ನಾವು ಮುಂದಾಗಬೇಕು. ಕೆಲವಕ್ಕೆ  ಸಮಯ ಕೂಡಿ ಬರಬೇಕು. ಕೆಲವಕ್ಕೆ ಸೃಷ್ಟಿಯ ಆಶಿರ್ವಾದ ಬೇಕು. ಇದೆಲ್ಲವೂ ಸೇರಿದಾಗಲೇ ನಮ್ಮ ಜೀವನಕ್ಕೊಂದು ಅರ್ಥ ಹುಟ್ಟಿಕೊಳ್ಳುವುದು. ದೈವ ಕಾರಣ ಎಷ್ಟಿದೆಯೋ ಅದರ ಎರಡು ಪಟ್ಟು ಮನುಷ್ಯ ಪ್ರಯತ್ನ ಬೇಕು ಎನ್ನುವ ಮಾತಿದೆ. ಅದರಂತೆ ನಾವು ನಿತ್ಯವೂ ಕಾರ್ಯಪ್ರವೃತ್ತರಾಗಿರುವುದು ಮಾತ್ರ ನಮ್ಮ ಕೆಲಸ.  ಉಳಿದದ್ದು ನಮಗೆ ಅನೀರೀಕ್ಷಿತವಾಗಿಯೇ ಸಿಗುತ್ತ ಸಾಗಲಿ ಅಲ್ಲವೆ. 

- * * * -