ಸಾಧಕರ ಸಾಧನೆಗಳು ಮುಂದಿನ ಪೀಳಿಗೆಗೆ ಸ್ಪೂರ್ತಿ ನೀಡಲಿ: ರಾಜಶೇಖರ ಎಸ್

May the achievements of achievers inspire the next generation: Rajashekar S

ಜಮಖಂಡಿ 08: ಇಂದಿನ ಸಾಧಕರ ಜೀವಮಾನ ಸಾಧನೆಗಳು ಕುರಿತು ಮುಂದಿನ ಪೀಳಿಗೆಗೆ ಪರಿಚಯಿಸುವುದು ಮಹಾನ ಕಾರ್ಯವಾಗಿದೆ. ಸಾಧಕರ ಸಾಧನೆಗಳು ಮುಂದಿನ ಪೀಳಿಗೆಗೆ ಪ್ರೇರಣೆ ಸ್ಪೂರ್ತಿ ನೀಡಲಿ ಎಂದು ಮಾಹಿತಿ ಹಕ್ಕುಗಳ ಆಯೋಗದ ಆಯುಕ್ತ ರಾಜಶೇಖರ ಎಸ್ ಹೇಳಿದರು.  

ನಗರದ ಗುರುದೇವ ರಾನಡೆ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾ, ತಾಲೂಕಾ ಕಸಾಪ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ನಮನ ಟ್ರಸ್ಟ್‌, ಸಾಹಿತ್ಯ ಸೌರಭ ವೇದಿಕೆ, ವೀರೇಶ್ವರ ಪ್ರಕಾಶನ ಸಹಯೋಗದಲ್ಲಿ ನಡೆದ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಸಂಗಮೇಶ ಮಟೋಳಿ ಅವರ ವಿರಚಿತ ಜಮಖಂಡಿ ತಾಲ್ಲೂಕಿನ ಅಪರೂಪದವರು ಕೃತಿ ಲೋಕಾರೆ​‍್ಣ ಮತ್ತು ರಾಜ್ಯಮಟ್ಟದ ‘ಸಾಧಕರತ್ನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕೃತಿಯನ್ನು ಲೋಕಾರೆ​‍್ಣ ಮಾಡಿ ಮಾತನಾಡಿದರು. 

ಬೆಂಗಳೂರು ಜಿಲ್ಲಾ ನೋಂದಣಾಧಿಕಾರಿ ಸವಿತಾಲಕ್ಷ್ಮೀ ಬೆಳಗಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಮಖಂಡಿ ರಾನಡೆ ಅವರಂತ ತತ್ವಜ್ಞಾನಿಯನ್ನು ಕೊಟ್ಟಂತ ನಾಡಾಗಿದೆ, ಶಿಕ್ಷಣ, ಸಾಹಿತ್ಯ, ಕ್ರೀಡೆ ಹಾಗೂ ಕಲಾವಿದರ ಕುರಿತು ವ್ಯಕ್ತಿಚಿತ್ರಣಕ್ಕೆ ಸೇರಬಹುದಾದ ಲೇಖನಗಳನ್ನು ಕೃತಿಯಲ್ಲಿ ದಾಖಲಿಸುವ ಮೂಲಕ ಕಾಲಾಂತರದಲ್ಲಿ ಸಾಧಕರು ಮರೆತು ಹೋಗಬಾರದೆಂಬ ಲೇಖಕರ ಕಳಕಳಿ ಮೆಚ್ಚುವಂತಹದ್ದು ಎಂದರು. 

ಬಾಗಲಕೋಟೆಯ ವಿಶ್ರಾಂತ ಪ್ರಾಚಾರ್ಯ ಪ್ರೊ.ಎನ್,ಆರ್, ಹಳ್ಳೂರ ಕೃತಿ ಪರಿಚಯಿಸುತ್ತ ಮಾತನಾಡಿ, ಜಮಖಂಡಿ ತಾಲ್ಲೂಕಿನ ಅಪರೂಪದವರು ಕೃತಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡಿರುವ ಲೇಖಕ ಡಾ,ಸಂಗಮೇಶ ಮಟೋಳಿ ತಮ್ಮದೆಯಾದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ ಎಂದರು. 

ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಸಾಧಕರ ಮೇಲೆ ಪಿಎಚ್‌ಡಿ ಮಾಡುವ ಕಾರ್ಯಗಳು ಆಗಬೇಕು, ಸಾಧಕರ ಗ್ರಂಥಗಳು ರಚನೆಯಾಗಬೇಕು ಎಂದರು. ಹಿರಿಯ ಪತ್ರಕರ್ತ ಡಾ,ಪಿ,ಗಿರಡ್ಡಿ ಸಾಧಕ ರತ್ನ ಪ್ರಶಸ್ತಿ ಪಡೆದು ಅನಿಸಿಕೆ ಹಂಚಿಕೊಂಡರು. ಸಾಹಿತಿ ಸಂಗಮೇಶ ಮಟೋಳಿ ಪ್ರಾಸ್ತವಿಕವಾಗಿ ಮಾತನಾಡಿದರು. 

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಎಂ.ಸಿ.ಗೊಂದಿ, ಹಿರಿಯ ಸಾಹಿತಿ ಬಸವರಾಜ ಯಡಹಳ್ಳಿ, ಡಾ.ಎಚ್‌.ಜಿ.ದಡ್ಡಿ, ಬಸವರಾಜ ಗಿರಗಾಂವಿ, ಎಂ.ಬಿ.ಇಂಡಿ, ನಿ ಶ್ರೀಶೈಲ, ಪ್ರವೀಣ ಕುಲಕರ್ಣಿ ಸೇರಿದಂತೆ 35 ಜನ ಸಾಧಕರಿಗೆ ಸಾಧಕ ರತ್ನ ಪ್ರಶಸ್ತಿ ಪ್ರದಾನ ಮಾಡಿದರು. 

ವೇದಿಕೆಯಲ್ಲಿ ಪಿಬಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಭೂಷಣ ಪತ್ತಾರ, ಕಸಾಪ ತಾಲೂಕಾಧ್ಯಕ್ಷ ಸಂತೋಷ ತಳಕೇರಿ, ಪ್ರೊ. ರಾಜಶೇಖರ ಹೊಸಟ್ಟಿ ಇದ್ದರು. ಸವಿತಾ ಶಿರಗುಪ್ಪಿ, ಎನ್‌.ಬಿ.ಮಾಲಗಾರ ನಿರೂಪಿಸಿದರು. 

ಕಾರ್ಯಕ್ರಮದ ಮುಂಚೆ ನಗರದ ದೇಸಾಯಿ ಸರ್ಕಲ್‌ನಿಂದ ಅಶೋಕ ಸರ್ಕಲ್ ರಾನಡೆ ಭವನದವರೆಗೆ ಕರಡಿ ಮಜಲು ಸೇರಿದಂತೆ ವಿವಿಧ ವಾದ್ಯಮೇಳದೊಂದಿಗೆ ಜಮಖಂಡಿ ತಾಲ್ಲೂಕಿನ ಅಪರೂಪದವರು ಕೃತಿಗಳ ಭವ್ಯ ಮೆರವಣಿಗೆ ಜರುಗಿತು.