ಗದಗ 07: ಮಕ್ಕಳ ಸಹಾಯವಾಣಿ 1098 ಸಂಖ್ಯೆ ದೂರವಾಣಿ ಸೇವೆಯು 24 ಗಂಟೆಗಳ ತುರ್ತು ಉಚಿತ ದೂರವಾಣಿ ಸೇವೆಯಾಗಿದೆ. ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆ, ಅವರ ಪಾಲನೆ ಪೋಷಣೆ ಸೌಲಭ್ಯ ನೀಡುವುದು ಇದರ ಉದ್ದೇಶವಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಮಕ್ಕಳ ಸಹಾಯವಾಣಿ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
ಮಕ್ಕಳ ಸಹಾಯವಾಣಿಯೊಂದಿಗೆ ಮಕ್ಕಳ ರಕ್ಷಣಾ ಘಟಕ, ಪೊಲೀಸ ಇಲಾಖೆ, ಶಿಕ್ಷಣ ಇಲಾಖೆ ಜೊತೆಗೆ ವಿವಿಧ ಇಲಾಖೆಗಳು ಮಕ್ಕಳ ರಕ್ಷಣೆಗೆ ಕೈಜೋಡಿಸಿ ಕಾರ್ಯನಿರ್ವಹಿಸಬೇಕು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ, ಹಾಗೂ ಬಾಲ ಕಾರ್ಮಿಕ ಪ್ರಕರಣಗಳಿದ್ದಲ್ಲಿ ಸಂಬಂಧಿತ ಅಧಿಕಾರಿಗಳು ಎಫ್. ಐ.ಆರ್. ದಾಖಲಿಸಬೇಕು. ಮಕ್ಕಳ ಬಿಕ್ಷಾಟನೆ ನಿಷೇಧ ಪರಿಣಾಮಕಾರಿಯಾಗಲು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ತಾಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿಯೂ ಸಹ ಸಮಿತಿಗಳನ್ನು ರಚಿಸಬೇಕು. ಮಕ್ಕಳ ಪಾಲಕರಿಗೆ ಗ್ರಾಮೀಣ ಪ್ರದೇಶದ ಅಂತಹ ಮಕ್ಕಳ ಪಾಲಕರಿಗೆ ಉದ್ಯೋಗ ಖಾತರಿ ಜಾಬ್ ಕಾರ್ಡ ವಿತರಿಸಲು ಕ್ರಮ ಕೈಗೊಳ್ಳಬೇಕು. ಎಲ್ಲಾ ಪಟ್ಟಣ, ಗ್ರಾಮ, ತಾಲೂಕು ಪಂಚಾಯತಿಯಲ್ಲಿ ಮಕ್ಕಳ ಸಹಾಯವಾಣಿ 1098 ಕುರಿತು ಕಡ್ಡಾಯವಾಗಿ ನಾಮಫಲಕ ಪ್ರದರ್ಶಿಸಲು ಎಂ.ಜಿ. ಹಿರೇಮಠ ನಿರ್ದೇಶನ ನೀಡಿದರು.
ಮಕ್ಕಳ ಸಹಾಯವಾಣಿ ಸಂಯೋಜಕರಾದ ಸೂರಜ ಮಯೇಕರ್ ಅವರು ಮಾತನಾಡಿ 2018-19 ನೇ ಸಾಲಿನಲ್ಲಿ ವೈದ್ಯಕೀಯ ಸೌಲಭ್ಯಕ್ಕೆ ಸಂಬಂಧಿಸಿದ 44 ಕರೆಗಳು, ವಸತಿ ಸೌಲಭ್ಯ ಕೋರಿ 24, ಆಪ್ತ ಸಮಾಲೋಚನೆಗಾಗಿ 45, ಕಾಣಿಯಾದ ಮಕ್ಕಳಿಗೆ ಸಂಬಂಧಿಸಿದ 38, ಶಾಲೆಗೆ ಸಂಬಂಧಿಸಿದ 110, ಶಾಲೆ ಬಿಟ್ಟ ಮಕ್ಕಳಿಗೆ ಸಂಬಂಧಿಸಿದ 31, ಬಿಕ್ಷಾಟನೆಗೆ ಸಂಬಂಧಿಸಿದ 54, ಬಾಲ್ಯವಿವಾಹಕ್ಕೆ ಸಂಬಂಧಿಸಿದ 56 , ದೈಹಿಕ ದೌರ್ಜನ್ಯಕ್ಕೆ ಸಂಬಂಧಿಸಿದ 22, ಮಾನಸಿಕ ದೌರ್ಜನ್ಯಕ್ಕೆ ಸಂಬಂಧಿಸಿದ 10, ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ 9 ಕರೆಗಳು ಮಕ್ಕಳ ಸಹಾಯವಾಣಿಗೆ ಸ್ವೀಕೃತವಾಗಿವೆ. 2019-20 ನೇ ಸಾಲಿನಲ್ಲಿ ಕಾಣಿಯಾದ ಮಕ್ಕಳಿಗೆ ಸಂಬಂಧಿಸಿದಂತೆ 27, ಶಾಲೆ ಬಿಟ್ಟ ಮಕ್ಕಳಿಗೆ ಸಂಬಂಧಿಸಿದ 31 , ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 13 ಕರೆಗಳು ಸ್ವೀಕೃತವಾಗಿವೆ ಎಂದು ಸಭೆಗೆ ತಿಳಿಸಿದರು.
ಜಿಲ್ಲಾ ಮಕ್ಕಳ ಸಹಾಯವಾಣಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಕೆ.ಕೆ.ಮಾಳೋದೆ ಮಕ್ಕಳ ಸಹಾಯವಾಣಿ ಕಾರ್ಯನಿರ್ವಹಣೆ ಕುರಿತು ಮಾತನಾಡಿದರು.
ಗದಗ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಎನ್. ಯತೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗರೆ, ಗದಗ ಬೆಟಗೇರಿ ನಗರಸಭೆ ಪೌರಾಯಕ್ತ ಮನ್ಸೂರ ಅಲಿ, ಕಾರ್ಮಿಕ ಇಲಾಖೆಯ ಅಧಿಕಾರಿ ಸುಧಾ ಗರಗ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶೈಲಾ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಮಂಜುನಾಥ ಬಮ್ಮನಕಟ್ಟಿ, ಪ್ರಾದೇಶಿಕ ಸಾರಿಗೆ ಇಲಾಖೆಯ ಗಣೇಶ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿಗಳೂ, ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.