ರಾಘವೇಂದ್ರ ಮಠ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಮುಂದುವರೆಯಲಿ

ಲೋಕದರ್ಶನ ವರದಿ

ಅಥಣಿ 23: ದಾನಿಗಳ ಸಹಕಾರದಿಂದ ಅಥಣಿಯ ಶ್ರೀರಾಘವೇಂದ್ರ  ಮಠ ಸಮಗ್ರ ಅಭಿವೃದ್ಧಿಯಾಗಿದ್ದು, ಶ್ರೀಮಠ ಮುಂದೆಯೂ ಸಹ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಲಿ ಎಂದು ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲ ಡಾ.ಸತ್ಯಧ್ಯಾನಾಚಾರ್ಯ ಕಟ್ಟಿ ಹೇಳಿದರು. ಅವರು ಸ್ಥಳೀಯ ಶ್ರೀ ರಾಘವೇಂದ್ರ ಮಠದಲ್ಲಿ ಆಯೋಜಿಸಿದ್ದ ದಾನಿಗಳ ಸತ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.  

     ಪೌರಾಣಿಕ ಕಾಲದಿಂದಲೂ ಬೆಳೆದು ಬಂದ ದಾನದ ಪರಂಪರೆ ಇಂದಿಗೂ ಮುಂದುವರೆದುಕೊಂಡು ಬಂದಿದೆ. ಕಷ್ಟಪಟ್ಟು ಸಂಪಾದಿಸಿದ ಸಂಪತ್ತಿನಲ್ಲಿ ಒಂದು ಭಾಗವನ್ನು ಕೌಟುಂಬಿಕ ಅವಶ್ಯಕತೆಗಾಗಿ, ಇನ್ನೊಂದು ಭಾಗವನ್ನು ಸಂಕಷ್ಟದ ಸಮಯದಲ್ಲಿ ಉಪಯೋಗಕ್ಕಾಗಿ ಮತ್ತೊಂದು ಭಾಗವನ್ನು ಧರ್ಮ, ಸಮಾಜ, ಶೈಕ್ಷಣಿಕ ಅಭಿವೃದ್ಧಿಗಾಗಿ ದಾನ ನೀಡಬೇಕು. ದಾನ ಮಾಡುವಾಗ ದಾನ ಮಾಡುವವನ ಮತ್ತು ದಾನವನ್ನು ಪಡೆದುಕೊಳ್ಳುವವನ ಭಾವ ಶುದ್ಧವಾಗಿರಬೇಕು ಹೊರತು ದಾನದಲ್ಲಿ ಉದ್ದೇಶ ಅಥವಾ ದುರುದ್ದೇಶ ಇರಬಾರದು ಎಂದು ಹೇಳಿದ ಅವರು ದಾನಿಗಳು ಪ್ರಶಂಸೆ ಬಯಸಬಾರದು ಆದರೆ ದಾನ ಪಡೆದುಕೊಂಡವರು ದಾನಿಗಳನ್ನು ಪ್ರಶಂಸಿಸದೆ ಇರಬಾರದು ಎಂದು ಕಿವಿ ಮಾತು ಹೇಳಿದರು. 

     ಅಧ್ಯಕ್ಷತೆ ವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಅರವಿಂದರಾವ ದೇಶಪಾಂಡೆ ಮಾತನಾಡಿ,  ಬಲಿಚಕ್ರವರ್ತಿ ಮಹಾರಾಜ ದಾನದಲ್ಲಿ ಅವನನ್ನು ಮೀರಿಸುವವರು ಯಾರೂ ಇರಲಿಲ್ಲ. ತಾನೊಬ್ಬ ಶ್ರೇಷ್ಠ ದಾನಶೂರ ಎನ್ನುವ ಅಹಂಕಾರದ ಭಾವವೂ ಕೂಡ ಅವನಲ್ಲಿತ್ತು ಆದರೆ ಪರಮಾತ್ಮ ವಾಮನ ರೂಪದಲ್ಲಿ ಅವತರಿಸಿ ಮೂರು ಪಾದಗಳಷ್ಟು ಭೂಮಿ ಕೇಳಿ ಬಲಿಚಕ್ರವರ್ತಿಯ ಅಹಂಕಾರವನ್ನು ಮಟ್ಟಿ ಹಾಕಿದ ಕಥೆ ನಮಗೆ ಪುರಾಣ ಕಾಲದಿಂದಲೂ ಬಂದಿದೆ ಎಂದ ಅವರು ನಮ್ಮಲ್ಲಿ ಸಂಪತ್ತು ಇದೆ ಎಂದು ಅಹಂಕಾರ ಭಾವದಿಂದ ದಾನ ಮಾಡದೇ ಧರ್ಮ, ಸಮಾಜ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ  ದಾನ ಮಾಡಬೇಕು ಎಂದರು.  ವಿಜಯಪುರದ ಪಂ.ಮಧ್ವಾಚಾರ್ಯ ಮೋಖಾಶಿ ಮಾತನಾಡಿ, ದಾನದ ಪರಂಪರೆ ಮುಂದುವರೆದುಕೊಂಡು ಬಂದಿದ್ದರಿಂದಲೇ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಭವ್ಯವಾಗಿ ಬೆಳೆದು ನಿಂತಿದೆ ಇದೇ ರೀತಿ ದಾನಿಗಳು ಮತ್ತಷ್ಟು ಸಹಕಾರ ನೀಡಿದಲ್ಲಿ ಶ್ರೀ ಮಾಠ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ಆಶಿಸಿದರು.  

      ಪ್ರಾಸ್ತಾವಿಕವಾಗಿ ಮಾತನಾಡಿದ ರಾಘವೇಂದ್ರ ಸ್ವಾಮಿ ಮಠದ ಟ್ರಸ್ಟನ ಉಪಾಧ್ಯಕ್ಷ ಎಸ್.ವಿ.ಜೋಶಿ ಅತ್ಯಂತ ಸಣ್ಣ ಪ್ರಮಾಣದಲ್ಲಿ ದಿ.ಭೀಮದಾಸರಿಂದ ಪ್ರಾರಂಭಗೊಂಡಿದ್ದ ರಾಘವೇಂದ್ರ ಮಠ ಇಂದು ದಾನಿಗಳ ಸಹಕಾರದಿಂದಲೇ ಭವ್ಯವಾಗಿ ಬೆಳೆದು ಬಂದಿದೆ. ದಾನಿಗಳು ನೀಡಿದ ದಾನವನ್ನು ಸಧ್ವಿನಿಯೋಗ ಮಾಡಿಕೊಂಡ ಹಿನ್ನೆಲೆಯಲ್ಲಿಯೇ ಶ್ರೀ ಮಠ ಅಭಿವೃದ್ಧಿಯಾಗಿದೆ ಎಂದ ಅವರು 50000 ಸಾವಿರ ಮೇಲ್ಪಟ್ಟ ಹಣವನ್ನು ದಾನವಾಗಿ ನೀಡುವ ದಾನಿಗಳ ಜೀವಿತಾವಧಿಯಲ್ಲಿ ಒಂದು ಕಾರ್ಯಕ್ರಮಕ್ಕೆ ಕಲ್ಯಾಣ ಮಂಟಪವನ್ನು ಉಚಿತವಾಗಿ ನೀಡುತ್ತೇವೆ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಟ್ರಸ್ಟನ ಸದಸ್ಯರಾದ ಅನೀಲ ದೇಶಪಾಂಡೆ (ಸರಾಫ), ಅನೀಲ ದೇಶಪಾಂಡೆ (ಹಿಡಕಲ್), ರಾಜು ಪಾಟೀಲ, ಶ್ರೀನಿವಾಸಾಚಾರ್ಯ ಬಿಳ್ಳೂರ ಉಪಸ್ಥಿತರಿದ್ದರು. ವಾಮನ ಕುಲಕಣರ್ಿ ನಿರೂಪಿಸಿದರು, ಶ್ರೀನಿವಾಸಾಚಾರ್ಯ ಬಿಳ್ಳೂರ ಅತಿಥಿಗಳನ್ನು ಪರಿಚಯಿಸಿದರು, ಅನೀಲ ದೇಶಪಾಂಡೆ ವಂದಿಸಿದರು. ಶ್ರೀಮಠಕ್ಕೆ ದಾನ ನೀಡಿದ ದಾನಿಗಳನ್ನು ಮತ್ತು ಶ್ರೀ ಮಾಠದ ಅಭಿವೃದ್ಧಿಗಾಗಿ ಶ್ರಮಿಸಿದ 75 ವರ್ಷ ಮೇಲ್ಪಟ್ಟ ಸ್ವಯಂ ಸೇವಕರನ್ನು ಸತ್ಕರಿಸಲಾಯಿತು. ದಾನಿಗಳ ಪರವಾಗಿ ಬೆಳಗಾವಿಯ ಉದ್ಯಮಿ ಮಧ್ವಾಚಾರ್ಯ ಆಯಿ ಮಾತನಾಡಿದರು.