ಮಲೇಷ್ಯಾ ಮಾಸ್ಟರ್ಸ: ಸಿಂಧು ಸೈನಾ ಮುನ್ನಡೆ, ಶ್ರೀಕಾಂತ್, ಕಶ್ಯಪ್ ಗೆ ಆಘಾತ

ಕೌಲಾಲಂಪುರ್, ಜ.8 ವಿಶ್ವದ ಮಾಜಿ ನಂಬರ್ 1 ಆಟಗಾರ್ತಿ ಸೈನಾ ನೆಹ್ವಾಲ್ ಹಾಗೂ ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಸಾಧನೆ ಮಾಡಿರುವ ಪಿ.ವಿ ಸಿಂಧು ಅವರು ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು 21-15, 21-13 ರಿಂದ ರಷ್ಯಾದ ಎವ್ಗೆನಿಯಾ ಕೊಸೆಟ್ಸ್ಕಯಾ ಅವರನ್ನು 35 ನಿಮಿಷಗಳ ಕಾದಾಟದಲ್ಲಿ ಮಣಿಸಿ ಮುನ್ನಡೆದರು. ಮೊದಲ ಹಾಗೂ ಎರಡನೇ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಸಿಂಧು, ಅರ್ಹ ಜಯ ದಾಖಲಿಸಿದರು. ಇನ್ನೊಂದು ಪಂದ್ಯದಲ್ಲಿ ಸೈನಾ 21-15, 21-17 ರಿಂದ ಬೆಲ್ಜಿಯಂನ ಲಿಯಾನ್ನೆ ಟ್ಯಾನ್ ಅವರನ್ನು ಏಕಪಕ್ಷಿಯ ಕಾದಾಟದಲ್ಲಿ ಮಣಿಸಿದರು. ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಪ್ರಣಯ್ ಎಚ್.ಎಸ್ 21-9, 21-17 ರಿಂದ ಜಪಾನ್ ನ ಕಾಂತ ತ್ಸುನೇಯಮಾ ಆಟಗಾರನನ್ನು 34 ನಿಮಿಷದ ಹೋರಾಟದಲ್ಲಿ ಸೋಲಿಸಿ ಮುನ್ನಡೆ ಸಾಧಿಸಿದರು. ಇನ್ನೊಂದು ಪಂದ್ಯದಲ್ಲಿ ಸಾಯಿ ಪ್ರಣೀತ್ 11-21, 15-21 ರಿಂದ ಡೆನ್ಮಾಕರ್್ ನ ರಾಸ್ಮಸ್ ಜೆಮ್ಕೆ ವಿರುದ್ಧ, ಪರುಪಳ್ಳಿ ಕಶ್ಯಪ್ 17-21, 16-21 ರಿಂದ ಜಪನಾನ ಕೆಂಟಾ ಮೊಮೊಟ ವಿರುದ್ಧ, ಕಿಡಂಬಿ ಶ್ರೀಕಾಂತ್ 17-21, 5-21 ರಿಂದ ಚೊ ಟೈನ್ ಚೆನ್ ವಿರುದ್ಧ ಆಘಾತಕ್ಕೆ ಒಳಗಾದರು.