ಕೊಪ್ಪಳ 23: ನಗರದ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಕೊಪ್ಪಳದಲ್ಲಿ ದಿನಾಂಕ 23ರಂದು ಲಿಂ. ಶಿವಶಾಂತವೀರ ಶಿವಯೋಗಿಗಳ ಪುಣ್ಯಾರಾಧನೆಯ ಅಂಗವಾಗಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಹಾಗೂ ಶ್ರೀಗವಿಸಿದ್ಧೇಶ್ವರ ಅಜ್ಜನ ಜಾತ್ರೆ 2025 ರ ಸಕಲಚೇತನ ಶಿಬಿರದಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಉಚಿತ ಕೃತಕ ಅಂಗಾಂಗ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಮುಖ್ಯ ಅತಿಥಿಗಳಾದ ಮಹೇಂದ್ರ ಸಿಂಘ್ವಿ, ನಿರ್ದೇಶಕರು, ಮಹಾವೀರ ಲಿಂಬ್ ಸೆಂಟರ್, ಹುಬ್ಬಳ್ಳಿ ಇವರು ಮಾತನಾಡಿ ಇಲ್ಲಿಯವರೆಗೂ ತಾವು ನಡೆಸಿದ ಸುಮಾರು 350 ಶಿಬಿರಗಳಲ್ಲಿ ಇದು ವಿಭಿನ್ನವಾದುದು. ಗವಿಮಠ ಶ್ರೀಗಳು ಸಮಾಜಮುಖಿ ಕಾರ್ಯಗಳನ್ನು ಮೌನಕ್ರಾಂತಿಯೊಂದಿಗೆ ನಡೆಸುತ್ತಿದ್ದಾರೆ ಎಂದರು. ಕೊಪ್ಪಳದ ಉಪ ಪೋಲೀಸ್ ಅಧೀಕ್ಷಕರಾದ ಮುತ್ತಣ್ಣ ಸರ್ವಗೋಳ ಮಾತನಾಡಿ ಸಮಾಜದ ಕಾರ್ಯವೈಖರಿ ನಡೆಸಲು ಶ್ರೀಗಳು ನಮ್ಮೆಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಯಾದ ಸೋಮರೆಡ್ಡಿ ಅಳವಂಡಿ ಮಾತನಾಡಿ ವಿಕಲಚೇತನರಿಗೆ ಜೀವನ ನೀಡುವುದು ಬಹುದೊಡ್ಡ ಕೆಲಸ ಹಾಗೂ ಈ ನಿಟ್ಟಿನಲ್ಲಿ ರೆಡ್ ಕ್ರಾಸ್ ಸಂಸ್ಥೆಯು ಸಾಮಾಜಿಕ ಕೆಲಸಗಳನ್ನು ಹಲವಾರು ರೀತಿಯಲ್ಲಿ ಮಾಡುತ್ತಾ ಬಂದಿದೆ. ಈ ಸಂದರ್ಭದಲ್ಲಿ ಸಂಸ್ಥೆ ವತಿಯಿಂದ ಒಂದು ವಿಕಲಚೇತನ ಚಿಕ್ಕ ಮಗುವಿನ ಜೀವನ ಸುಗಮವಾಗಿರಲು ಅವಳನ್ನು ದತ್ತು ಪಡೆಯಲು ಮುಂದಾದರು.
ಮಹಾವಿದ್ಯಾಲಯದ ಚೇರಮನ್‌ರಾದ ಸಂಜಯ ಕೊತಬಾಳ ಮಾತನಾಡಿ ವಿಕಲಚೇತನರ ಬದುಕು ಕಠಿಣವಾದುದು ಹಾಗೂ ಇವರಿಗೆ ನೆರವಾಗಲು ಕೈ ಜೋಡಿಸಿದರೆ ಅದು ನಿಜವಾದ ಸಕಲಚೇತನ ಕಾರ್ಯಕ್ರಮದ ಸಾರ್ಥಕತೆ ಎಂದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಹಾಂತೇಶ ಸಾಲಿಮಠ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿ ಗವಿಮಠವು ಇನ್ನೂ ಅನೇಕ ವಿಶೇಷ ಕಾರ್ಯಕ್ರಮಗಳನ್ನು ಜನರ ಹಿತಕ್ಕಾಗಿ ಹಮ್ಮಿಕೊಳ್ಳಲು ಚಿಂತನೆ ನಡೆಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಉಚಿತ ಕೃತಕ ಅಂಗಾಂಗ ವಿತರಣೆಯನ್ನು ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮಹಾವೀರ ಲಿಂಬ್ ಸೆಂಟರ್ ಹುಬ್ಬಳ್ಳಿ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಒಟ್ಟು 47 ಜನರಿಗೆ ಮಾಡಲಾಯಿತು. ಬೃಹತ್ ಉಚಿತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರದಲ್ಲಿ ಸುಮಾರು 300 ಕ್ಕೂ ಹೆಚ್ಚು ಜನ ಇದರ ಸದುಪಯೋಗ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಚಂದ್ರಶೇಖರಯ್ಯ ಹಿರೇಮಠ ಅಧ್ಯಕ್ಷರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಯಲಬುರ್ಗಾ, ಮಹೇಶ ಮುದುಗಲ್ ನಿರ್ದೇಶಕರು ಬಿ.ಬಿ.ಎಂ ಶಾರದಮ್ಮ ಕೊತಬಾಳ ಕಾಲೇಜು ಕೊಪ್ಪಳ, ಡಾ. ಸಿ.ಎಸ್.ಕರಮುಡಿ, ಉಪಸಭಾಪತಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಮತ್ತು ಸತೀಶ ಅಗಡಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ. ಗವಿ ಪಾಟೀಲ ಸ್ವಾಗತಿಸಿದರು ಮತ್ತು ಡಾ. ಜೀತೇಂದ್ರ ವಂದನಾರೆ್ಣ ನೇರವೇರಿಸಿದರು.