ಲೋಕದರ್ಶನ ವರದಿ
ಚನ್ನಮ್ಮನ ಕಿತ್ತೂರ 02: ರೈತರ ಕೃಷಿ ಉತ್ಪನ್ನಗಳ ಪಾರದರ್ಶಕ ವಹಿವಾಟು, ಹಾಗೂ ತೂಕದಲ್ಲಿ, ಬೆಲೆಯಲ್ಲಿ ಆಗುತ್ತಿರುವ ಮೋಸ ಖಂಡಿಸಿ ಬೃಹತ್ ಪ್ರತಿಭಟನೆಯನ್ನು ದಿ. 10 ರಂದು ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕೃಷಿಕ ಸಮಾಜ ( ಸಂಯುಕ್ತ) ರೈತ ಸಂಘಟನೆಯ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ತಿಳಿಸಿದರು.
ಅವರು ಮಂಗಳವಾರ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಕಾಯಿದೆ ಪ್ರಕಾರ ಕೃಷಿ ಉತ್ಪನ್ನಗಳ ಮಾರಾಟದಲ್ಲಿ ರೈತರಿಂದ ಕಮಿಷನ್ ಪಡೆಯಲು ಅವಕಾಶವಿರುವದಿಲ್ಲ. ಹೀಗಿದ್ದರೂ ಕಾಯಿದೆಯನ್ನು ಉಲ್ಲಂಘಿಸಿ ರೈತರಿಂದ ಕಮಿಷನ್ ಪಡೆಯುತ್ತಾರೆ. ಇದು ನಿಲ್ಲಬೇಕು. ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ದಿ ನಿಯಮ 78 (1) ರ ಅಡಿಯಲ್ಲಿ ಬರುವಂತೆ ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆಯಲ್ಲಿ ಪಾರದರ್ಶಕತೆಗೆ ಒತ್ತು ನೀಡಬೇಕೆಂದರು. ಮತ್ತು ಮಾರುಕಟ್ಟೆ ಪ್ರಾಂಗಣದಲ್ಲಿ ಅನಧಿಕೃತ ಕಂಪನಿಗಳ ಹೆಸರಿನಲ್ಲಿ ನಿರಂತರ ಮೋಸ ನಡೆಯುತ್ತದೆ ಇಂತಹ ಕಂಪನಿಗಳ ಹಾವಳಿ ತಡೆಯಬೇಕು, ಟೆಂಡರನಲ್ಲಿ ಮಾರಾಟ ಮಳಿಗೆ ಪಡೆದ ಅಧಿಕೃತ ಪರವಾಣಿಗೆ ಹೊಂದಿದವರಿಗೆ ಮಾತ್ರ ವಹಿವಾಟಿಗೆ ಅವಕಾಶ ಕಲ್ಪಿಸಬೇಕು ಎಂದ ಅವರು ಪ್ರತಿ 15 ದಿವಸಕ್ಕೆ ತೂಕ ಮತ್ತು ಅಳತೆ ಮಾಪನ ಇಲಾಖೆಯಿಂದ ತೂಕ ಯಂತ್ರಗಳ ಪರಿಶೀಲನೆ ನಡೆಸಬೇಕು ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಪ್ರಾಂಗಣದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ರೈತರು ತಾವು ಬೆಳೆದ ಬೆಳೆಯನ್ನು ಚಕ್ಕಡಿ ಮೂಲಕ ಮಾರುಕಟ್ಟೆಗೆ ತರುತ್ತಾರೆ ಅಂತಹ ಜಾನುವಾರುಗಳಿಗೆ ಅಗತ್ಯ ಮೇವು, ನೀರು ಹಾಗೂ ವೈದ್ಯಕೀಯ ಸೇವೆಯ ಜೊತೆಗೆ ವಿಶ್ರಾಂತಿಗಾಗಿ ನೆರಳಿನ ವ್ಯವಸ್ಥೆಯನ್ನು ಮಾಡಬೇಕೆಂದು ಹೇಳಿದರು. ರಾಜ್ಯ ಗೌರವ ಅಧ್ಯಕ್ಷ ಜಯಪ್ಪ ಬಸರಕೋಡ, ಪಿ ಎಸ್ ಬೋಗೂರ. ಇನ್ನೂ ಹಲವರು ಉಪಸ್ಥಿತರಿದ್ದರು.