ಕಾಮ್ರೇಡ್ ಮಾರುತಿ ಮಾನ್ಪಡೆ ಇನ್ನಿಲ್ಲ; ಸಿಐಟಿಯು ಹಾಗೂ ಕನ್ನಡ ಸಾಹಿತ್ಯ ಪರಿಷತ್ ನಿಂದ ಸಂತಾಪ

ಮಾರುತಿ ಮಾನ್ಪಡೆ

ಶ್ರಮಜೀವಿಗಳ ಹೋರಾಟದ ನಾಯಕ ಕಾಮ್ರೇಡ್ ಮಾರುತಿ ಮಾನ್ಪಡೆ ಇನ್ನಿಲ್ಲ; 

ಸಿಐಟಿಯು ಹಾಗೂ ಕನ್ನಡ ಸಾಹಿತ್ಯ ಪರಿಷತ್ ನಿಂದ ಸಂತಾಪ 



ಕಾರವಾರ ,ಅ. 20  : ನಾಡಿನ ಶೋಷಿತರ, ರೈತ ಕಾರ್ಮಿಕ ಶ್ರಮಜೀವಿಗಳ ಮುಂದಾಳು ಮಾರುತಿ ಮಾನ್ಪಡೆಯವರು ಎರಡು ವಾರಗಳ ಕಾಲ ಕೋವಿಡ್ ನಿಂದ ಬಳಲಿ ಮಂಗಳವಾರ  ಬೆಳಿಗ್ಗೆ ನಿಧನರಾದರು. ಅವರಿಗೆ ೬೫ ವರ್ಷ. ಸಿಐಟಿಯು ಉತ್ತರ ಕನ್ನಡ ಜಿಲ್ಲಾ ಸಮಿತಿ ತನ್ನ ತೀವ್ರ ದುಃಖವನ್ನು ವ್ಯಕ್ತಪಡಿಸುತ್ತದೆ. ಕುಟುಂಬಕ್ಕೆ,  ಆಪ್ತೇಷ್ಟರಿಗೆ ಸಂತಾಪಗಳನ್ನು ಸೂಚಿಸಿದೆ. 


ಸ್ವತಃ ಶೋಷಿತ ಸಮುದಾಯದಲ್ಲಿ ಜನಿಸಿದ ಮಾರುತಿ ಮಾನ್ಪಡೆಯವರು ಆಯ್ಕೆ ಮಾಡಿಕೊಂಡುದು ಕಷ್ಟದ ಬದುಕು. ಸಮಾನತೆಗಾಗಿ ಹೋರಾಟಕ್ಕೆ ತಮ್ಮ ಜೀವನವನ್ನು ಮೀಸಲಿಟ್ಟರು.   ಸರ್ಕಾರಿ ನೌಕರಿ ಬಿಟ್ಟು, ಸಂಘಟನೆ ತನಗೆ ವಹಿಸಿದ ಜವಾಬ್ದಾರಿಯನ್ನು ನಿಭಾಯಿಸುತ್ತ ಕಾರ್ಮಿಕ ಚಳುವಳಿ, ರೈತ ಕೂಲಿಕಾರ ಮತ್ತು ಮಹಿಳೆಯರ ಚಳುವಳಿ ಕಟ್ಟುತ್ತ ಮುನ್ನಡೆದರು. ದೇವದಾಸಿ ಮಹಿಳೆಯರ ಹಕ್ಕುಗಳಿಗೆ ಅವಿರತ ಶ್ರಮಿಸಿದರು, ದಲಿತ ಹಕ್ಕುಗಳ ಸಮಿತಿಆ,  ಸಂಘಟಿಸಲು ಶ್ರಮಿಸಿದವರಲ್ಲಿ ಮಾನ್ಪಡೆಯವರು ಒಬ್ಬರು. ರಾಜ್ಯದಲ್ಲಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಚಳುವಳಿಯನ್ನು ಪ್ರಾರಂಭಿಸಿದವರಲ್ಲಿ ಮೊದಲಿಗರೂ, ಗ್ರಾಮ ಪಂಚಾಯತ್ ನೌಕರರ ಚಳುವಳಿಯ ಅಚ್ಚಳಿಯದ ನಾಯಕರೂ, ಕರ್ನಾಟಕ ಪ್ರಾಂತ ರೈತ ಸಂಘದ ನಿಕಟಪೂರ್ವ ರಾಜ್ಯ ಅಧ್ಯಕ್ಷರೂ ಆಗಿ ಹೀಗೆ ಅನೇಕ ಜವಾಬ್ದಾರಿ ನಿಭಾಯಿಸಿದ್ದಾರೆ. ಹೈದ್ರಾಬಾದ್ ಕರ್ನಾಟಕ ಸಾಂವಿಧಾನಿಕ ವಿಶೇಷ ಸ್ಥಾನಮಾನ ಮತ್ತು ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಹೋರಾಟ, ಕೃಷಿಕರ, ತೊಗರಿ ಬೆಳೆಗಾರರ ಸಲುವಾಗಿ, ಉದ್ಯೋಗ ಖಾತ್ರಿ ಸಮರ್ಪಕ ಜಾರಿಗೆ, ಅರಣ್ಯ ಹಕ್ಕುಗಳ ಕಾಯ್ದೆ ತಿದ್ದುಪಡಿ ಮತ್ತು ಉತ್ತಮ ಅಂಶಗಳ ಜಾರಿಗೆ ಸಂಘಟನಾತ್ಮಕವಾಗಿ ಅವಿರತ ಶ್ರಮಿಸಿದ ಮಾರುತಿ ಮಾನ್ಪಡೆಯವರು ಕಲ್ಯಾಣ ಕರ್ನಾಟಕದ ಹೋರಾಟದ ಸಮರ್ಥ ನಾಯಕರು ಹೌದು. ಇವರು ಸಿಪಿಐಎಂ ನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. 

ಕಾರವಾರಕ್ಕೆ ಅನೇಕ ಸಲ ಬಂದಿದ್ದರು : 

ರೈತ ಕಾರ್ಮಿಕ ನಾಯಕರಾದ ಇವರು ಹಿಡಿದ ಕೆಲಸ ಬೆನ್ಹತ್ತಿ ಮಾಡುವವರಾಗಿದ್ದರು. ಉತ್ತರ ಕನ್ನಡಕ್ಕೂ ಅನೇಕ ಚಳುವಳಿಗೆ ಮಾರ್ಗದರ್ಶನಕ್ಕೆ ಬಂದಿದ್ದರು. ಕೆಲವು ಬಾರಿ ಗ್ರಾಮ ಪಂಚಾಯತ್ ಮಟ್ಟಕ್ಕೂ ಬಂದಿದ್ದರು. ಪಂಚಾಯತಿ ನೌಕರರ ಸಂಘಟನೆ ಮತ್ತು ಹೋರಾಟಗಳಲ್ಲಿ, ಉಕ ಅರಣ್ಯ ಅತಿಕ್ರಮಣ ಸಕ್ರಮಣ ಹೋರಾಟ, ಭೂ ಆಂದೋಲನ ಹೊನ್ನಾವರ, ಜೋಯಿಡಾ ದಿಂದ ಕಾರವಾರಕ್ಕೆ ಪಾದಯಾತ್ರೆ ಮತ್ತು ೧೯೯೭-೯೮ ರಲ್ಲಿ ಕಾಳಿ ನಿರಾಶ್ರಿತರ ಹೋರಾಟ, ರಾಜಧಾನಿವರೆಗೂ ಸಂಚಲನ ಮೂಡಿಸಿದ ೧೦೮ ದಿನಗಳ ಕಾಲ ನಡೆದ ಕೈಗಾ ಯೋಜನಾ ಬಾಧಿತರ ಹೋರಾಟ ಹೀಗೆ ಹತ್ತಾರು ಬಾರಿ ಬಂದಿದ್ದರು. 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನವಿರೋಧಿಯಾಗಿ ತರುತ್ತಿರುವ ನೀತಿಗಳ ವಿರುದ್ಧ ಪ್ರಬಲ ಚಳುವಳಿ ಸಂಘಟಿಸಲಾಗುತ್ತಿರುವ ಈ ದಿನಗಳಲ್ಲಿ, ರಾಜ್ಯದ ಜನಪರ ಚಳುವಳಿಗೆ ಅವರ ಸೈದ್ಧಾಂತಿಕ ಬದ್ಧತೆಯ ಕೆಲಸದ ಮತ್ತು ಸಾಮರ್ಥ್ಯದ ಅಗತ್ಯವಿತ್ತು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಶಾಂತಾರಾಮ ನಾಯಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಕಾರವಾರ ತಾಲೂಕಾ ಅಧ್ಯಕ್ಷ ನಾಗರಾಜ ಹರಪನಹಳ್ಳಿ, ಸಿಐಟಿಯುನ ಯಮುನಾ ಗಾಂವ್ಕರ್  ಹೇಳಿದ್ದಾರೆ.

..........