ಪ್ರತಿ ಮನೆಯ ಯಜಮಾನಿ ಖಾತೆಗೆ ಇಲ್ಲಿಯವರೆಗೆ ರೂ. 58,000 ಜಮೆ: -ಅರವಿಂದ ಏಗನಗೌಡರ

    ಪ್ರತಿ ಮನೆಯ ಯಜಮಾನಿ ಖಾತೆಗೆ ಇಲ್ಲಿಯವರೆಗೆ ರೂ. 58,000 ಜಮೆ: -ಅರವಿಂದ ಏಗನಗೌಡರ Rs. 58,000 has been deposited in the account of each household till now: -Arvind Eganagowda

ಲೋಕದರ್ಶನ ವರದಿ 

ಧಾರವಾಡ  29: ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವುದೇ ನಮ್ಮ ಸಮಿತಿಯ ಮುಖ್ಯ ಉದ್ದೇಶವಾಗಿದೆ. ಅದರಲ್ಲೂ ಗೃಹಲಕ್ಷ್ಮಿ ಯೋಜನೆಯಡಿ ಧಾರವಾಡ ತಾಲೂಕಿನ ಪ್ರತಿ ಅರ್ಹ ಯಜಮಾನಿಯ ಖಾತೆಗೆ ಇದುವರೆಗೆ ತಲಾ ರೂ. 58,000 ಗಳಷ್ಟು ಹಣ ನೇರವಾಗಿ ಜಮೆಯಾಗಿದೆ ಎಂದು ಧಾರವಾಡ ತಾಲೂಕ ಗ್ಯಾರಂಟಿ ಸಮಿತಿ ಅಧ್ಯಕ್ಷ ಅರವಿಂದ ಏಗನಗೌಡರ ತಿಳಿಸಿದರು. ಅವರು ಇಂದು (ಏ.29) ಬೆಳಿಗ್ಗೆ ಧಾರವಾಡ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಗ್ಯಾರಂಟಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.  

ಈಗಾಗಲೇ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಭೆಗಳನ್ನು ನಡೆಸಿ, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವ ಮೂಲಕ ಯೋಜನೆಗಳ ಅನುಷ್ಠಾನದಲ್ಲಿ ಎದುರಾಗುವ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡಲು ಶ್ರಮಿಸುತ್ತಿದ್ದೇವೆ ಎಂದು ಅವರು ಹೇಳಿದರು. 

ವಿವಿಧ ಇಲಾಖೆಗಳ ಪ್ರಗತಿ ವರದಿ: ಗೃಹ ಲಕ್ಷ್ಮೀ ಯೋಜನೆಯಡಿ ತಾಲೂಕಿನಲ್ಲಿ ಒಟ್ಟು 56,943 ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಇದುವರೆಗೆ ಯಶಸ್ವಿಯಾಗಿ 29 ಕಂತುಗಳು ಪೂರ್ಣಗೊಂಡಿದ್ದು, ಒಟ್ಟು ರೂ. 6,10,91,92,000 ಹಣವನ್ನು ಫಲಾನುಭವಿಗಳ ಖಾತೆಗೆ ಸಂದಾಯ ಮಾಡಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಾಹಿತಿ ನೀಡಿದರು. ಅನ್ನಭಾಗ್ಯ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಒಟ್ಟು 52,526 ಪಡಿತರ ಚೀಟಿಗಳಿದ್ದು, 70 ನ್ಯಾಯಬೆಲೆ ಅಂಗಡಿಗಳ ಮೂಲಕ ಸುಗಮವಾಗಿ ವಿತರಣೆ ನಡೆಯುತ್ತಿದೆ. ಹೊಸದಾಗಿ ಸಲ್ಲಿಕೆಯಾದ 273 ಅರ್ಜಿಗಳು ಪ್ರಸ್ತುತ ಪರೀಶೀಲನಾ ಹಂತದಲ್ಲಿವೆ. 

ಗೃಹಜ್ಯೋತಿ ಯೋಜನೆಯಡಿ ಹೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 52,195 ಫಲಾನುಭವಿಗಳು ಶೂನ್ಯ ದರದ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದು, ಇಲ್ಲಿಯವರೆಗೆ ಸರ್ಕಾರದಿಂದ ರೂ. 5429.39 ಲಕ್ಷಗಳಷ್ಟು ವೆಚ್ಚ ಭರಿಸಲಾಗಿದೆ.  ಶಕ್ತಿ ಯೋಜನೆಯಡಿ ಮಾರ್ಚ್‌-2026 ರ ಅಂತ್ಯದವರೆಗೆ ಶಹರ ಮತ್ತು ಗ್ರಾಮೀಣ ಘಟಕಗಳ ಮೂಲಕ ಒಟ್ಟು 45,44,395 ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇದರಿಂದ ಸಾರಿಗೆ ಸಂಸ್ಥೆಗೆ ಒಟ್ಟು ರೂ. 7,97,69,206 ಗಳಷ್ಟು ಆದಾಯ ಸಂದಾಯವಾಗಿದೆ. 

 ಯುವ ನಿಧಿ ಯೋಜನೆಯಡಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವರದಿಯಂತೆ 3,898 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಪದವಿ ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಒಟ್ಟು ರೂ. 8,57,58,000 ಗಳಷ್ಟು ನಿರುದ್ಯೋಗ ಭತ್ಯೆ ವಿತರಿಸಲಾಗಿದೆ. ಸಭೆಯಲ್ಲಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ಯಾರಂಟಿ ಸಮಿತಿ ಸದಸ್ಯ ಕಾರ್ಯದರ್ಶಿ ಗಂಗಾಧರ ಕಂದಕೂರ, ಸಮಿತಿ ಸದಸ್ಯರಾದ ಚಂದ್ರಶೇಖರ ಕದಂ, ಮಂಜುನಾಥ ಉಡಿಕೇರಿ, ಕಾರ್ತಿಕ ಗೋಕಾಕ, ಮೈಲಾರಗೌಡ ಪಾಟೀಲ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.