ಭಾರತ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳಾದ ಭಗತ್‌ಸಿಂಗ್, ಸುಖದೇವ್ ಹಾಗೂ ರಾಜಗುರು ಅವರ 95ನೇ ಹುತಾತ್ಮ ದಿನದ ಅಂಗವಾಗಿ ಇಂದು ಕರ್ನಾಟಕ ವಿಶ್ವವಿದ್ಯಾಲಯದ ಮೈದಾನ ಹಾಗೂ ಚರಂತಿಮಠ ಉದ್ಯಾನವನದಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ನಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
23ನೇ ವಯಸ್ಸಿನಲ್ಲೇ ನಗುನಗುತ ಗಲ್ಗಂಬವೇರಿ ಕ್ರಾಂತಿಕಾರಿಗಳು ಎಷ್ಟು ಧೈರ್ಯದಿಂದ ತಮ್ಮ ದ್ವೇಯಕ್ಕಾಗಿ, ದೇಶಕ್ಕಾಗಿ ್ರಾಣಾರೆ್ಪಣ ಮಾಡಬಲ್ಲರು ಎಂಬುದನ್ನು ತೋರಿಸಿದ ಮಹಾನ್ ಚೇತನ, ಕ್ರಾಂತಿಯ ಕಿಡಿ "ಭಗತ್ ಸಿಂಗ್". 1931 ಮಾರ್ಚ್ 23ರಂದು ಭಗತ್‌ಸಿಂಗ್ ಕ್ರಾಂತಿಯ ಅಗ್ನಿಕುಂಡಕ್ಕೆ ್ರಾಣಾರೆ್ಪಣ ಮಾಡಿದ ದಿನ. ದೇಶದ ಜನತೆಯು ಮನೆ ಮಗನನ್ನೇ ಕಳೆದುಕೊಂಡಂತೆ ಕಣ್ಣೀರಿಟ್ಟ ದಿನ. ಎಷ್ಟೋ ಯುವಕರು ದೇಶಕ್ಕಾಗಿ ತಮ್ಮ ಜೀವನವನ್ನು ಮುಡುಪಿಡಲು ಶಪಥ ಮಾಡಿದ ದಿನ. ಸ್ವಾತಂತ್ರ್ಯ ಸಂಗ್ರಾಮದ ಉದ್ದಾನುದ್ದ ನಾವು ಎರಡು ಪ್ರವಾಹಗಳನ್ನು ಕಾಣುತ್ತೇವೆ.
ಒಂದು ಸಶಸ್ತ್ರ ಕ್ರಾಂತಿಕಾರಿ ರಾಜಿರಹಿತ ಪಂಥ, ಇನ್ನೊಂದು ರಾಜಿ, ಒಪ್ಪಂದಗಳಿಂದ ತುಂಬಿಹೋದ ರಾಜಿಪರ ಪಂಥ. ರಾಜಿಪರ ಪಂಥದ ನಾಯಕರಾಗಿ ಗಾಂಧೀಜಿಯವರು "ಡೊಮಿನಿಯನ್ ಸ್ಟೇಟಸ್" ಅಂದರೆ ಬ್ರಿಟಿಷರ ಕಾಲಡಿ "ಅಧಿಕಾರ" ನಡೆಸಿಕೊಂಡು ಹೋಗುವ ಗುಲಾಮತನವನ್ನೇ ಸ್ವಾತಂತ್ರ್ಯ ಎಂದರು. ಆದರೆ ರಾಜೀರಹಿತ ಪಂಥದ ನಾಯಕರು ಭಗತ್‌ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ಇನ್ನಿತರೇ ಕ್ರಾಂತಿಕಾರಿಗಳು ಸಂಪೂರ್ಣ ಸ್ವರಾಜ್ ಘೋಷಣೆ ಮೊಳಗಿಸಿ ಬ್ರಿಟಿಷರೇ, ದೇಶ ಬಿಟ್ಟು ತೊಲಗಿ ಎಂಬ ಸ್ಪಷ್ಟ ನಿಲುವನ್ನು ತಳೆದಿದ್ದರು. ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟದಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಬಂತು ಎಂದು ನಮ್ಮನ್ನಾಳುವ ಸರ್ಕಾರಗಳು ಸಾರುತ್ತವೆ.
1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದೇ ಕರೆಯಲ್ಪಡುವ ಸಿಪಾಯಿ ದಂಗೆ ಸಶಸ್ತ್ರ ಹೋರಾಟಕ್ಕೆ ಸಾಕ್ಷಿ. ವಾಸುದೇವ್ ಬಲವಂತ ಫಡಕೆ, ಬಾಲ್ ಗಂಗಾಧರ್ ತಿಲಕ್, ಚಾಪೇಕರ್ ಸಹೋದರರು, ಬಿಪಿನ್ ಚಂದ್ರಪಾಲ್, ಖುದಿರಾಮ್, ಭಾಘಾ ಜತಿನ್, ಪ್ರಫುಲ್ಲ ಚಾಕಿ, ರಾಸ್ ಬಿಹಾರಿ ಬೋಸ್, ಸೂರ್ಯ ಸೇನ್, ಪ್ರೀತಿಲತಾ ವದ್ದೆದಾರ್ ಹೀಗೆ ಸಶಸ್ತ್ರ ಹೋರಾಟದ ರಾಜೀರಹಿತ ಪಂಥದ ಕ್ರಾಂತಿಕಾರಿ ಹೋರಾಟದ ಆಗಸದಲ್ಲಿ ಎಣಿಸಲಾಗದಷ್ಟು ದೇದಿಪ್ಯಮಾನವಾದ ನಕ್ಷತ್ರಗಳಿವೆ.ಭಗತ್ ಸಿಂಗ್ ಬಾಲ್ಯದಲ್ಲಿ ಗಾಂಧೀಜಿಯವರ ಹೋರಾಟದಿಂದ ಪ್ರೇರಿತರಾಗಿ 1921ರ ಅಸಹಕಾರ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ವಿದೇಶಿ ಬಟ್ಟೆಗಳನ್ನು ಗುಡ್ಡೆ ಹಾಕಿ ಸ್ನೇಹಿತರೊಂದಿಗೆ ಸೇರಿ ಘೋಷಣೆಗಳನ್ನು ಹಾಕುತ್ತಾ ಬಟ್ಟೆಗಳನ್ನು ಸುಡುವಷ್ಟು ರಾಜಕೀಯವಾಗಿ ಕ್ರಿಯಾಶೀಲರಾಗಿದ್ದರು. ಈ ಸಂದರ್ಭದಲ್ಲಿ 1922ರ ಫೆಬ್ರವರಿ ನಾಲ್ಕರಂದು ಉತ್ತರ ಪ್ರದೇಶದ ಚೌರಿಚೌರ ಎಂಬಲ್ಲಿ ಪೊಲೀಸರು ರಕ್ಕಸರಂತೆ ವರ್ತಿಸಿ ಜನರನ್ನು ಕೊಂದಾಗ ಜನ ತಿರುಗಿಬಿದ್ದು ಪೊಲೀಸ್ ಠಾಣೆಗೆ ಬೆಂಕಿ ಇಟ್ಟರು. ಅದರಲ್ಲಿ ಕೆಲವು ಪೊಲೀಸರು ಹತ್ಯೆಯಾಗಿದ್ದರಿಂದ ನಮ್ಮ ಹೋರಾಟ ಹಿಂಸಾತ್ಮಕ ದಾರಿ ಹಿಡಿಯುತ್ತಿದೆ ಎಂದು ಏಕಾಏಕಿ ಗಾಂಧೀಜಿಯವರು ಹೋರಾಟವನ್ನು ಹಿಂತೆಗೆದುಕೊಂಡರು. ಆಯುಧಗಳಿಂದ ಸಜ್ಜಾದ ರಾಜ್ಯ ಯಂತ್ರ ನಿರಾಯುಧ ಅಸಹಾಯಕ ಜನರನ್ನು ಕೊಂದಾಗ ಜನತೆಗೆ ಎದಿರೇಟಿನ ಹಕ್ಕಿಲ್ಲವೆಂಬ ಗಾಂಧೀಜಿಯವರ ವಾದದಿಂದ ಜನ ದಿಗ್ವಾಂತರಾದರು. ಎಲ್ಲೆಡೆ ಹೋರಾಟದ ಜ್ವಾಲೆಗೆ ತಣ್ಣೀರೆರೆಚಿದಂತಾಯಿತು.
ಅನೇಕ ಯುವಕರು ಗಾಂಧೀಜಿಯವರ ಮಾರ್ಗವನ್ನು ತೊರೆದರು ಭಗತರು ಸಹ ತಮ್ಮ ದಾರಿಯನ್ನು ಬದಲಿಸಿದರು. "ಡೊಮಿನಿಯನ್ ಸ್ಟೇಟಸ್", "ರಾಮರಾಜ್ಯ"ದಿಂದ ನಮ್ಮ ಜನಗಳ ಬವಣೆ ತೀರದು. ಸಂಪೂರ್ಣ ಸ್ವರಾಜ್ ನಮ್ಮ ಘೋಷಣೆಯಾಗಬೇಕು, ದೇಶದ ಜನತೆ ಬ್ರಿಟಿಷರ ದಮನದಿಂದ ತತ್ತರಿಸಿರುವಾಗ ಸಾವಿರಾರು ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗುವ ರಾಮರಾಜ್ಯ ಪರಿಹಾರವಲ್ಲವೆಂದರು. ಕ್ರಾಂತಿಕಾರಿಗಳ ಸಂಘಟನೆಯಾದ ಹಿಂದುಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ ಸೇರಿ, ಭಗತ್ ಸಿಂಗ್ ಸಮಾಜವಾದದ ವಿಚಾರಗಳಿಗೆ ವೇಗವಾಗಿ ಆಕರ್ಷಿತರಾದರು. ಅಷ್ಟು ಹೊತ್ತಿಗೆ ರಷ್ಯಾದಲ್ಲಿ ಸಮಾಜವಾದಿ ಕ್ರಾಂತಿ ಯಶಸ್ವಿಯಾಗಿ ಸುಮಾರು 10 ವರ್ಷಗಳಾಗಿತ್ತು. ವಿಶ್ವದ ಎಲ್ಲೆಡೆ ಆಗ ಕಾರ್ಲ್ ಮಾರ್ಕ್ಸ್‌ರ ಕಮ್ಯುನಿಸ್ಟ್ ಸಿದ್ದಾಂತದ ಕುರಿತು ಹಾಗೂ ಲೆನಿನ್‌ರವರ ನೇತೃತ್ವದ ಸೋವಿಯತ್ ಒಕ್ಕೂಟದಲ್ಲಿ ನಡೆದಿದ್ದ ಸಮಾಜವಾದಿ ಕ್ರಾಂತಿಯ ಕುರಿತು ಗಾಢವಾದ ಆಸಕ್ತಿ ಬೆಳೆಯುತ್ತಿತ್ತು.
ಮಾರ್ಕ್ಸ ವಾದಿ ಸಿದ್ಧಾಂತ, ಬಂಡವಾಳಶಾಹಿ ಪದ್ಧತಿಗೆ, ದುರಾಸೆಯ ಕ್ರೂರ ಸಾಮ್ರಾಜ್ಯಶಾಹಿ ದುರಾಕ್ರಮಣಕ್ಕೆ ನಿರ್ಣಾಯಕವಾಗಿ ಕೊನೆಹಾಕುತ್ತದೆಂಬ ಆಶಾಭಾವನೆ ಎಲ್ಲೆ ಹರಡಿತ್ತು. ಭಗತ್‌ರ ನೈಜ ಸ್ವಾತಂತ್ರ್ಯ ಭಾರತದ ಕನಸಿಗೆ ದಾರಿ ಸ್ಪಷ್ಟವಾಯಿತು.ಇಂದು ನಮ್ಮ ಸಮಾಜ ಅತ್ಯಂತ ಕಡುಕಷ್ಟಗಳನ್ನು ಎದುರಿಸುತ್ತಿದೆ. ಶಿಕ್ಷಣ ದಿನದಿಂದ ದಿನಕ್ಕೆ ತನ್ನ ಗುಣಮಟ್ಟವನ್ನು ಕಳೆದುಕೊಂಡು ಮಕ್ಕಳನ್ನು ಯಂತ್ರವನ್ನಾಗಿಸುತ್ತಿದೆ. ಯುವಕರೇ ಹೆಚ್ಚಿರುವ ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಯುವಕರ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಮಹಿಳೆಯರು ಧೈರ್ಯವಾಗಿ, ಸುರಕ್ಷಿತವಾಗಿ ಇರುವ ಜಾಗ ಇಲ್ಲದಂತಾಗಿದೆ. ಕಾಮುಕರ ಕಣ್ಣಿಗೆ ಹಸು-ಗೂಸುಗಳು ಬಲಿಯಾಗುತ್ತಿವೆ. ಇನ್ನು ಅಗತ್ಯ ವಸ್ತುಗಳ ಬೆಲೆ ಏರಿಕೆ, ಆರೋಗ್ಯ, ಮೂಲಭೂತ ಸೇವಾಕ್ಷೇತ್ರಗಳು ಖಾಸಗೀಕರಣಗೊಂಡು, ಜನರ ಜೀವನ ಬೀದಿ ಪಾಲಾಗುತ್ತಿದೆ. ಮತ್ತೊಂದೆಡೆ ಜಾತಿ, ಧರ್ಮ, ಭಾಷೆ, ಗಡಿ, ಪ್ರಾಂತ್ಯ ಮುಂತಾದ ಬಾವನಾತ್ಮಕ ವಿಷಯಗಳನ್ನು ಜನರ ಮನಸ್ಸಿನಲ್ಲಿ ಬಿತ್ತುತ್ತ ಒಡಕನ್ನುಂಟು ಮಾಡಿ ಮುಖ್ಯ ಸಮಸ್ಯೆಗಳಿಂದ ವಿಮುಖರನ್ನಾಗಿಸಲಾಗುತ್ತಿದೆ. ಹೆತ್ತತಾಯಿಗೆ ಅನ್ನ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡ ಯುವಕ, ಕುಡಿಯಲು ನೀರಿಲ್ಲದೆ ರಸ್ತೆ ಬದಿಯಲ್ಲಿ ಬಿಂದಿಗೆ ಹಿಡಿದು ನೀರು ತುಂಬುವ ಮಗಳು, ಸರ್ಕಾರಿ ಆಸ್ಪತ್ರೆಯಲ್ಲೂ ಚಿಕಿತ್ಸೆಗೆ ಹಣ ನೀಡಲಾಗದೆ ಆಸ್ಪತ್ರೆಯ ಸಿಬ್ಬಂದಿಗಳ ಕಾಲು ಹಿಡಿಯುವ ಕೈಗಳು ಇಂತಹ ಲೆಕ್ಕವಿರದಷ್ಟು ಹೃದಯವಿದ್ರಾವಕ ಘಟನೆಗಳು ಮನಸಾಕ್ಷಿಯನ್ನು ಕಾಡುತ್ತಿದೆ. ಇವೆಲ್ಲವೂ ಭಗತ್‌ಸಿಂಗ್ ಕಂಡ ಸ್ವತಂತ್ರ ಭಾರತದ ಕನಸು ಇದಲ್ಲವೆಂದು ಸಾರಿ ಸಾರಿ ಹೇಳುತ್ತವೆ. ಇದಕ್ಕೆ ಕೊನೆ ಹಾಡಲು ಮತ್ತೆ ಮತ್ತೆ ಭಗತರು ಹುಟ್ಟಿ ಬರುವರೆಂದೇ ಭಗತ್ ಸಿಂಗ್ ನೇಣುಗಂಬಕ್ಕೆ ಮುತ್ತಿಟ್ಟು ಪ್ರಾಣ ಬಿಟ್ಟಿದ್ದು ಅಲ್ಲವೇ? ನಾವು ಅವರ ಸಾವನ್ನು ಪೋಲಾಗಲು ಬಿಡಬಾರದು. ಅವರು ಕಂಡ ಶೋಷಣೆ ಮುಕ್ತ ಸಮಾಜವಾದಿ ಸಮಾಜ ಕಟ್ಟಲು ಯುವಜನತೆ ಸಾಲುಗಟ್ಟಿದ್ದಾರೆ ಎಂಬುದನ್ನು ಸಾಬೀತು ಮಾಡಲು ವೈಚಾರಿಕವಾಗಿ, ಉನ್ನತ ನೀತಿ, ನೈತಿಕತೆ, ಸಂಸ್ಕೃತಿಯೊಂದಿಗೆ ಸಜ್ಜಾಗಬೇಕಿದೆ. ಇಂದಿನ ಈ ಅನ್ಯಾಯಗಳ ವಿರುದ್ಧ ಧ್ವನಿಯೆತ್ತಬೇಕಿದೆ.ಈ ಸಂದರ್ಭದಲ್ಲಿ ಎಐಡಿವೈಓ ಧಾರವಾಡ ಜಿಲ್ಲಾ ಅಧ್ಯಕ್ಷರಾದ ಭವಾನಿಶಂಕರ ಗೌಡ, ಕಾರ್ಯದರ್ಶಿ ರಣಜೀತ್ ಧೂಪದ್ ಜಿಲ್ಲಾ ಸಂಘಟನಾಕಾರರಾದ ಪ್ರೀತಿ, ಪ್ರತಾಪ್ ಜಾಧವ್ ಸೇರಿದಂತೆ ಯುವಜನರು, ನಾಗರಿಕರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.