ಮದುವೆ ನಿಶ್ಚಯವಾಗಿಲ್ಲ, ವದಂತಿ ಹರಡದಿರಿ: ರಚಿತಾರಾಮ್‍

ಬೆಂಗಳೂರು, ಜ 23,ಸ್ಯಾಂಡಲ್‍ವುಡ್‍ ನ ಗುಳಿಕೆನ್ನೆ ಚೆಲುವೆ ರಚಿತಾರಾಮ್ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಿಲ್ಲೊಂದು ಸುದ್ದಿ ಹರಿದಾಡುತ್ತಿದೆ‘ಸೀತಾರಾಮ ಕಲ್ಯಾಣ’ದ ನಾಯಕ ನಿಖಿಲ್ ಕುಮಾರಸ್ವಾಮಿಯ ಜೊತೆ ಕುಚ್ ಕುಚ್ ನಡೆಯುತ್ತಿದೆ. . . . ರಚಿತಾಗೆ ಮದುವೆ ನಿಶ್ಚಯವಾಗಿದೆ ಎಂಬ ಗುಸುಗುಸು, ಪಿಸುಪಿಸು ಸುದ್ದಿ, ಸತತ ಹದಿನೈದು ದಿನಗಳಿಂದ ವೈರಲ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಟ್ವಿಟ್ ಮಾಡಿರುವ ರಚಿತಾರಾಮ್, ಕೇವಲ ಮನರಂಜನೆಗಾಗಿ ಸಲ್ಲದ ಸುದ್ದಿಗಳನ್ನು ಪ್ರಕಟಿಸಿ ಬೇಸರ ಉಂಟು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. “ಈ ನಡುವೆ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ಟ್ವಿಟರ್, ಇನ್‍ ಸ್ಟಾಗ್ರಾಮ್, ಯೂಟ್ಯೂಬ್ ಮೊದಲಾದೆಡೆ ಹರಿದಾಡುತ್ತಿರುವ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಲು ಬಯಸುತ್ತೇನೆ. ನನ್ನ ಸಿನಿಮಾಗಳ ಕುರಿತಾದ ವಿಷಯಗಳಾಗಲಿ, ವೈಯಕ್ತಿಕ ವಿಷಯಗಳಾಗಲಿ ನನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದರೆ ಮಾತ್ರ ಸತ್ಯವೆಂದು ಪರಿಗಣಿಸಿ. ಮನರಂಜನೆಗಾಗಿ ವದಂತಿ ಸೃಷ್ಟಿಸಿದರೆ ಖುಷಿಯಾಗಬಹುದು.  ಆದರೆ ಅದರಿಂದ ನನಗೆ ಹಾಗೂ ವದಂತಿಗೆ ಸಿಲುಕಿದ ಸಂಬಂಧಪಟ್ಟ ವ್ಯಕ್ತಿಗಳಿಗೆ ಬೇಸರವಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಮುಖ್ಯವಾದ ವಿಚಾರವೆಂದರೆ, ನನಗೆ ಮದುವೆ ನಿಶ್ಚಯವಾಗಿಲ್ಲ.  ನಾನು ಮದುವೆಯಾಗುವ ಸಂದರ್ಭದಲ್ಲಿ ನಿಮಗೆಲ್ಲ ವಿಚಾರ ತಿಳಿಸಿ, ಗುರು ಹಿರಿಯರ ಆಶೀರ್ವಾದದೊಡನೆ ಆಗುತ್ತೇನೆ.  ವದಂತಿಗಳನ್ನು ನಂಬಿ ವೈಯಕ್ತಿಕ ವಿಚಾರಗಳ ಬಗ್ಗೆ ನಗೆಪಾಟಲಿಗೆ ಈಡುಮಾಡಬೇಡಿ” ಎಂದು ರಚಿತಾರಾಮ್ ವಿನಂತಿಸಿಕೊಂಡಿದ್ದಾರೆ.