ಮರೇವಾಡ : ಕರಿಯಮ್ಮದೇವಿ ನೂತನ ದೇವಾಲಯ ಲೋಕಾರೆ​‍್ಣ

ಮರೇವಾಡ : ಕರಿಯಮ್ಮದೇವಿ ನೂತನ ದೇವಾಲಯ ಲೋಕಾರೆ​‍್ಣ Marewada: New Kariyamma Devi temple opens to the public

ಲೋಕದರ್ಶನ ವರದಿ 

ಧಾರವಾಡ  16: ಹತ್ತಿರದ ತಾಲೂಕಿನ ಮರೇವಾಡ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀಹುಡೇದ ಕರಿಯಮ್ಮದೇವಿ ದೇವಾಲಯದ ಲೋಕಾರೆ​‍್ಣ ಏ.20 ರಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಂದ ಜರುಗಲಿದೆ.  ಈ ಧಾರ್ಮಿಕ ಸಮಾರಂಭದ ಅಂಗವಾಗಿ ಏ.18 ರಿಂದ 22 ರವರೆಗೆ ಪ್ರತಿನಿತ್ಯ ಸಂಜೆ 7 ಗಂಟೆಗೆ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಧರ್ಮ ಜಾಗೃತಿ ಸಮಾವೇಶ ಜರುಗಲಿದ್ದು, ಸೋಮಾಪೂರ ಗ್ರಾಮದ ಸಿದ್ಧರಾಮಯ್ಯ ಹಿರೇಮಠ ಅವರು ಪ್ರವಚನ ನೀಡುವರು.  

ಏ.18ರಂದು ಪ್ರಾತಃಕಾಲದಲ್ಲಿ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ದಾಸೋಹ ಸೇವೆಯ ಅನ್ನಸಂತರೆ​‍್ಣಗೆ ಚಾಲನೆ ನೀಡುವರು. ಸಂಜೆಯ ಧರ್ಮ ಸಮಾವೇಶದಲ್ಲಿ ಶಿರಕೋಳ ಹಿರೇಮಠದ ಶ್ರೀಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡುವರು.  ಏ.19ರಂದು ಸಂಜೆಯ ಧರ್ಮ ಸಮಾವೇಶದಲ್ಲಿ ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ನಂತರ ವಿವಿಧ ಜಾನಪದ ಕಾರ್ಯಕ್ರಮಗಳು ಜರುಗುವವು.  

ಪ್ರಾಣ ಪ್ರತಿಷ್ಠಾಪನೆ : ಏ.20 ರಂದು ಶ್ರೀ ಹುಡೇದ ಕರಿಯಮ್ಮದೇವಿ ಶಿಲಾವಿಗ್ರಹಕ್ಕೆ ಪ್ರಾತಃಕಾಲದಲ್ಲಿ ಪಂಚಾಮೃತ ಸಹಿತ ವಿಶೇಷ ದ್ರವ್ಯಗಳಿಂದ ಅಭಿಷೇಕ, ಹೋಮ, ಕುಂಕುಮಾರ್ಚನೆ, ಅಲಂಕಾರ ಪೂಜೆಯ ನಂತರ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ದೇವಿ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡುವರು. ನಂತರ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗುವುದು.  

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕಾರ್ಮಿಕ ಸಚಿವ ಸಂತೋಷ ಲಾಡ್, ಶಾಸಕ ವಿನಯ ಕುಲಕರ್ಣಿ, ಮಾಜಿ ಶಾಸಕರುಗಳಾದ ಅಮೃತ ದೇಸಾಯಿ ಮತ್ತು ಸೀಮಾ ಮಸೂತಿ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ,  ಜಿ.ಪಂ. ಸಿಇಓ ಭುವನೇಶ ಪಾಟೀಲ ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳುವರು. ಇದೇ ದಿನ ಸಂಜೆಯ ಧರ್ಮ ಸಮಾವೇಶದಲ್ಲಿ ಸವದತ್ತಿ ಮೂಲಿಮಠದ ಶ್ರೀಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡುವರು. ನಂತರ ಹಿರಿಯ ಜಾನಪದ ಕಲಾವಿದ ಇಮಾಮಸಾಬ ವಲ್ಲೆಪ್ಪನವರ ಅವರ ಜಾನಪದ ಹಾಡುಗಾರಿಕೆ ಜರುಗುವುದು.  

ಏ.21 ರಂದು ಸಂಜೆಯ ಧರ್ಮ ಸಮಾವೇಶದಲ್ಲಿ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡುವರು. ನಂತರ ಹಾಸ್ಯ ಹಾಗೂ ರಸಮಂಜರಿ ಕಾರ್ಯಕ್ರಮ ನಡೆಯಲಿವೆ. ಏ.22 ರಂದು ಸಂಜೆಯ ಧರ್ಮ ಸಮಾವೇಶದಲ್ಲಿ ಸುಳ್ಳ ಪಂಚಗೃಹ ಹಿರೇಮಠದ ಶ್ರೀಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡುವರು.

ನಂತರ ವಿವಿಧ ಮನರಂಜನಾ ಕಾರ್ಯಕ್ರಮ ಜರುಗುವವು.  ಏ.18 ರಿಂದ 22 ರವರೆಗೆ 5 ದಿನಗಳ ಈ ಧರ್ಮ ಯಜ್ಞದಲ್ಲಿ ಮರೇವಾಡ ಗ್ರಾಮದ ಹಲವಾರು ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡು ತಮ್ಮ ಪಾಲಿನ ಸೇವೆಗಳನ್ನು ಸಲ್ಲಿಸಲು ಸಹಕಾರ ಒದಗಿಸಿದ್ದಾರೆಂದು ಮರೇವಾಡದ ಶ್ರೀಹುಡೇದ ಕರಿಯಮ್ಮದೇವಿ ದೇವಸ್ಥಾನ ಟ್ರಸ್ಟ್‌ ಕಮೀಟಿಯ ಪದಾಧಿಕಾರಿಗಳು  ಜಂಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.