ಪಾಟ್ನಾ, ಡಿ. 25 - ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಂಗೀಕಾರವಾದ ನಂತರ ಉಂಟಾಗಿರುವ ರಾಜಕೀಯ ವಾತಾವರಣದ ಲಾಭವನ್ನು ಪಡೆದುಕೊಳ್ಳಲು ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್‌ಎಎಂ) ಅಧ್ಯಕ್ಷ ಜಿತನ್ ರಾಮ್ ಮಾಂಜಿ ಮುಂದಾಗಿದ್ದು, ಮುಸ್ಲಿಂ-ದಲಿತ ವೇದಿಕೆ ನಿರ್ಮಿಸಿ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಕ್ಕೆ ಸೆಡ್ಡು ಹೊಡೆಯುವ ಉದ್ದೇಶದಿಂದ ಮಜ್ಲಿಸ್-ಎ-ಇತ್ತಿಹಾದುಲ್ ಮುಸ್ಲಿಮೀನ್ (ಎಐಐಎಂಐಎಂ) ಯೊಂದಿಗೆ ಕೈಜೋಡಿಸಿದ್ದಾರೆ.
ಮಹಾಘಟಬಂಧನ್‌ನ ಭಾಗವಾಗಿದ್ದ ಹಿಂದೂಸ್ತಾನಿ ಅವಾಂ ಮೋರ್ಚಾಕ್ಕೆ ಮೈತ್ರಿಕೂಟದೊಳಗೆ ಸರಿಯಾದ ಗೌರವ ಸಿಗದ ಕಾರಣ ಮಾಂಜಿ ಅವರು ಕೋಪಗೊಂಡಿದ್ದರು. ಮುಸ್ಲಿಂ ದಲಿತ (ಎಂಡಿ) ವೇದಿಕೆ ರೂಪಿಸುವ ಅವರ ಈ ಕ್ರಮವನ್ನು ಆರ್‌ಜೆಡಿಯ ಮುಸ್ಲಿಂ-ಯಾದವ (ಎಂವೈ) ನೆಲೆಗೆ ನೇರ ಸವಾಲು ಎಂದು ಪರಿಗಣಿಸಲಾಗಿದೆ.
ಸಿಎಎ ಮತ್ತು ರಾಷ್ಟ್ರೀಯ ಪೌರತ್ವ ಕಾಯ್ದೆ (ಎನ್‌ಆರ್‌ಸಿ) ವಿರುದ್ಧ ಡಿಸೆಂಬರ್ 29 ರಂದು ಮುಸ್ಲಿಂ ಪ್ರಾಬಲ್ಯದ ಪ್ರದೇಶದವಾದ ಬಿಹಾರದ ಕಿಶನ್‌ಗಂಜ್‌ನಲ್ಲಿ ಏರ್ಪಡಿಸಿರುವ ಸಮಾವೇಶದಲ್ಲಿ ಎಐಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ ಅವರೊಂದಿಗೆ ಮಾಂಜಿ ಅವರು ವೇದಿಕೆ ಹಂಚಿಕೊಳ್ಳಲಿದ್ದಾರೆ.
ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಉಭಯ ನಾಯಕರು ಮಾತನಾಡಲಿದ್ದಾರೆ ಎಂದು ಎಚ್‌ಎಎಂ ರಾಷ್ಟ್ರೀಯ ವಕ್ತಾರ ಡ್ಯಾನಿಶ್ ರಿಜ್ವಾನ್ ಇಂದು ಇಲ್ಲಿ ಹೇಳಿದರು. ರಾಜ್ಯ ರಾಜಕೀಯಕ್ಕೆ ಹೊಸ ತಿರುವು ನೀಡಲು ಮಾಂಜಿ ಈ ಕ್ರಮ ಕೈಗೊಂಡಿದ್ದಾರೆ ಎಂದು ಅವರು ಹೇಳಿದರು.
ಎಂ-ಡಿ ಸಂಯೋಜನೆಯು ಆರ್‌ಜೆಡಿಯ ಎಂ-ವೈ ಮೈತ್ರಿಗೆ ಖಂಡಿತವಾಗಿಯೂ ಸಂಕಷ್ಟ ತಂದೊಡ್ಡಲಿದೆ ಎಂದು ಅವರು ಹೇಳಿದರು. ಮಹಾಘಟಬಂದನ್ ನಾಯಕರು ಮಾಂಜಿಯನ್ನು ತುಂಬಾ ಲಘುವಾಗಿ ತೆಗೆದುಕೊಳ್ಳಬಾರದು ಎಂದು ಹೇಳಿದರು.
ಇತ್ತೀಚೆಗೆ ಕಿಶನ್‌ಗಂಜ್‌ನಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ಅಭ್ಯರ್ಥಿ ಮುಹಮ್ಮದ್ ಕಮರುಲ್‌ಹುದಾ ಅವರು ಜಯಗಳಿಸಿದ್ದರು.