ಮಂಗಳೂರು ಬೂದಿ ಮುಚ್ಚಿದ ಕೆಂಡ: ಕೆಲವೆಡೆ ಕಲ್ಲು ತೂರಾಟ; ಜಿಲ್ಲೆಯಾದ್ಯಂತ ಸ್ವಯಂ ಪ್ರೇರಿತ ಬಂದ್

ಮಂಗಳೂರು, ಡಿ.20 ಪೌರತ್ವ ತಿದ್ದುಪಡಿ ಕಾಯ್ದೆ  ವಿರೋಧಿಸಿ ಮಂಗಳೂರಿನಲ್ಲಿ ಹಿಂಸಾತ್ಮಕರೂಪ ಪಡೆದಿರುವ ಪ್ರತಿಭಟನೆ  ಎರಡು ಬಲಿ  ಪಡೆದಿದ್ದು, ಸದ್ಯಕ್ಕೆ ಅಲ್ಲಿನ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಈ ನಡುವೆ ಬಸ್ಗಳ ಮೇಲೆ ಕೆಲವೆಡೆ ಕಲ್ಲು ತೂರಾಟ ನಡೆದ ಬಗ್ಗೆ ವರದಿಯಾಗಿದೆ.ಉಪ್ಪಿನಂಗಡಿ ಬಳಿಯ ಕುಪ್ಪೆಟ್ಟಿ ಎಂಬಲ್ಲಿ ಬೈಕ್ ನಲ್ಲಿ ಬಂದ  ಕೆಲ ಕಿಡಿಗೇಡಿಗಳು ಸರ್ಕಾರಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ.  ಧರ್ಮಸ್ಥಳದಿಂದ ಮಡಿಕೇರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು  ತೂರಾಟ ನಡೆಸಿದ್ದು ಬಸ್ ನ ಗಾಜು ಪುಡಿಪುಡಿಯಾಗಿದೆ.ಶುಕ್ರವಾರ ಮುಂಜಾನೆ ಎರಡು  ಕಡೆ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆದಿದೆ.  ಬೆಳ್ತಂಗಡಿ ತಾಲ್ಲೂಕಿನ ಪುಂಜಾಲಕಟ್ಟೆ  ವ್ಯಾಪ್ತಿಯಲ್ಲಿ ಮತ್ತು ಪುತ್ತೂರು ತಾಲ್ಲೂಕಿನ ಕುಪ್ಪಟ್ಟಿಯಲ್ಲಿ ಬಸ್ ಮೇಲೆ ಕಲ್ಲು  ತೂರಾಟ ನಡೆದಿದೆ. ಇನ್ನು ನಿನ್ನೆ ನಡೆದಿರುವ ಘಟನೆ ಬಗ್ಗೆ  ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಎಡಿಜಿಪಿ  ಅಮರ್ ಕುಮಾರ್ ಪಾಂಡೆ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್  ಕಟೀಲ್ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.ನಗರದಲ್ಲಿ ನಿನ್ನೆ ಪೌರತ್ವ ಕಾಯ್ದೆ  ವಿರುದ್ಧ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಗುರುವಾರದಿಂದ ದಕ್ಷಿಣ  ಕನ್ನಡ ಜಿಲ್ಲೆಯಾದ್ಯಂತ ಡಿಸೆಂಬರ್ 22ರವರೆಗೂ ಕರ್ಫ್ಯೂ ಜಾರಿ ಮಾಡಲಾಗಿದೆ. ಇಡೀ  ಜಿಲ್ಲೆಯಲ್ಲಿ ಸಂಚಾರ ವಿರಳವಾಗಿದ್ದು, ಬೂದಿ ಮುಚ್ಚಿದ ಕೆಂಡದಂತಿದೆ. ಆದಾಗ್ಯೂ ಇಂದು ಶುಕ್ರವಾರವಾಗಿದ್ದು, ಮುಸ್ಲಿಮರು ಮಧ್ಯಾಹ್ನ ವಿಶೇಷ ಪ್ರಾರ್ಥನೆ ಸಲ್ಲಿಸಬೇಕಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಕರ್ಫ್ಯೂ ಸಡಿಲಿಸಲಾಗಿದೆ. ಈ ಮಧ್ಯೆ ಕೇರಳದಿಂದ ಬಂದಿದ್ದ 50ಕ್ಕೂ ಅಧಿಕ ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿದ ನಗರ ಪೊಲೀಸ್ ಆಯುಕ್ತ ಪಿ.ಎಸ್. ಹರ್ಷ, ಅವರನ್ನು ಬಂಧಿಸಿದ ಘಟನೆಯೂ ನಡೆದಿದೆ. ಬಳಿಕ ಅವರು ಅಧಿಕೃತ ಪತ್ರಕರ್ತರು ಎಂದು ತಿಳಿದು ಬಿಡುಗಡೆ ಮಾಡಲಾಗಿದೆ.