ಬೆಂಗಳೂರು, ಡಿ 23, ಹಿಂಸೆಯಲ್ಲಿ ತೊಡಗಿದ್ದ ಗುಂಪೊಂದು ಪೊಲೀಸ್ ಠಾಣೆಗೆ ನುಗ್ಗಲು ಮುಂದಾಗಿದ್ದ ವೇಳೆ ಅದನ್ನು ತಡೆಯಲು ಮಂಗಳೂರಿನಲ್ಲಿ ಇದೇ 17ರಂದು ಪೊಲೀಸರು ನಡೆಸಿದ ಗುಂಡಿನದಾಳಿಯಲ್ಲಿ ಇಬ್ಬರು ಮೃತಪಟ್ಟ ಪ್ರಕರಣದ ತನಿಖೆಯನ್ನು ರಾಜ್ಯ ಸಿಐಡಿಗೆ ಆದೇಶಿಸಿರುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ತಿಳಿಸಿದ್ದಾರೆ.ಘಟನೆಯ ಕುರಿತು ಹೈಕೋರ್ಟ್ ನ ಹಾಲಿ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬೇಡಿಕೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ತಳ್ಳಿಹಾಕಿ, ಸಿಐಡಿಗೆ ತನಿಖೆಗೆ ಆದೇಶಿಸಿದ್ದಾರೆ.ಅಲ್ಪಸಂಖ್ಯಾತ ಸಮುದಾಯದ ಒಂದು ವರ್ಗದ ಜನರನ್ನು ಕಾಂಗ್ರೆಸ್ ಪ್ರಚೋದಿಸುತ್ತಿದೆ ಎಂದು ಆರೋಪಿಸಿದ ಯಡಿಯೂರಪ್ಪ, ಹಿಂಸಾಚಾರದಲ್ಲಿ ತೊಡಗಿ,ಪೊಲೀಸ್ ಠಾಣೆಗೆ ನುಗ್ಗಲು ಯತ್ನಿಸಿದ್ದ ಗುಂಪನ್ನು ನಿಯಂತ್ರಿಸಲು ಕೊನೆಯ ಹಂತವಾಗಿ ಪೊಲೀಸರು ಗುಂಡುಹಾರಿಸಿದ್ದಾರೆ ಇದು ಅತ್ಯಂತ ದುರದೃಷ್ಟಕರ ಘಟನೆ ಎಂದು ಅವರುಹೇಳಿದ್ದಾರೆ.ಸಿಐಡಿಯಲ್ಲಿ ದಕ್ಷ ಅಧಿಕಾರಿಗಳಿದ್ದು, ಘಟನೆಯ ಹಿಂದೆ ಯಾರಿದ್ದಾರೆ. ಗೋಲಿಬಾರ್ ನಡೆಸಲು ಕಾರಣವಾದ ಅಂಶಗಳು ಏನು ಎಂಬುದನ್ನು ಪತ್ತೆ ಹಚ್ಚಿ ಸತ್ಯಾಂಶ ಸಿಐಡಿ ತನಿಖೆಯಿಂದ ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗಲಭೆ ನಡೆದಿದ್ದ ಬಂದರು ನಗರಿ ಮಂಗಳೂರಿಗೆ ಭಾನುವಾರ ಭೇಟಿ ನೀಡಿದ್ದ ಮುಖ್ಯಮಂತ್ರಿಗಳು, ಪೊಲೀಸ್ ಗೋಲಿಬಾರ್ ನಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ಪ್ರಕಟಿಸಿದ್ದರು.