ಟೋಕಿಯೊ, ಆ 20 ಸ್ಟ್ರೈಕರ್ ಮಂದೀಪ್ ಸಿಂಗ್ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತ ಪುರುಷರ ಹಾಕಿ ತಂಡ ಮಂಗಳವಾರ ಆತಿಥೇಯ ಜಪಾನ್ ವಿರುದ್ಧ 6-3 ಅಂತರದಲ್ಲಿ ಗೆದ್ದು ಒಲಿಂಪಿಕ್ಸ್ ಟೆಸ್ಟ್ ಫೈನಲ್ಗೆ ಪ್ರವೇಶ ಮಾಡಿದೆ.
ನ್ಯೂಜಿಲೆಂಡ್ ವಿರುದ್ಧ ಕಳೆದ ಪಂದ್ಯದಲ್ಲಿ 1-2 ಅಂತರದಲ್ಲಿ ಸೋತು ನಿರಾಸೆ ಅನುಭವಿಸಿದ್ದ ಭಾರತ ತಂಡ, ಜಪಾನ್ ವಿರುದ್ಧದ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಯಿತು. ಹಾಗಾಗಿ, ಭಾರಿ ಅಂತರದಲ್ಲಿ ಪಂದ್ಯವನ್ನು ತನ್ನದಾಗಿಸಿಕೊಂಡಿದೆ. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಮತ್ತೆ ನ್ಯೂಜಿಲೆಂಡ್ ವಿರುದ್ಧ ಭಾರತ ಬುಧವಾರ ಸೆಣಸಲಿದೆ.
ಭಾರತದ ಪರ ಮಂದೀಪ್ ಸಿಂಗ್ 9ನೇ, 29ನೇ ಹಾಗೂ 30ನೇ ನಿಮಿಷಗಳಲ್ಲಿ ಹ್ಯಾಟ್ರಿಕ್ ಗೋಲು ಸಿಡಿಸಿದ್ದರು. ನೀಲಕಾಂತ್ ಶರ್ಮಾ 3ನೇ ನಿ., ನೀಲಂ ಸಂಜೀತ್ 7ನೇ ನಿ. ಹಾಗೂ ಗುಜ್ರಂತ್ ಸಿಂಗ್ 41ನೇ ನಿಮಿಷದಲ್ಲಿ ಒಟ್ಟು ಆರು ಗೋಲು ಸಿಡಿಸಿದ್ದರು. ಆದರೆ, ಜಪಾನ್ ಪರ ಕೆಂಟಾರೊ ಫುಕುಡ 25ನೇ ನಿ., ಕೆಂಟಾ ಟನಕ 36ನೇ ನಿ. ಹಾಗೂ ಕುಜುಮಾ ಮುರಾಟ 52ನೇ ನಿಮಿಷಗಳಲ್ಲಿ ಒಟ್ಟು ಮೂರು ಗೋಲುಗಳನ್ನು ಸಿಡಿಸಿದ್ದರು.
ಪಂದ್ಯ ಆರಂಭದ ಮೂರನೇ ನಿಮಿಷದಲ್ಲೇ ನಿಲಕಾಂತ್ ಅವರು ಭಾರತಕ್ಕೆ ಗೋಲಿನ ಖಾತೆ ತೆರೆದರು. ಬಳಿಕ ಏಳನೇ ನಿಮಿಷದಲ್ಲೇ ಸಿಕ್ಕ ಪೆನಾಲ್ಟಿ ಕಾರ್ನರ್ನಲ್ಲಿ ನೀಲಮ್ ಸಂಜೀತ್ ಅವರು ಭಾರತಕ್ಕೆ 2-0 ಮುನ್ನಡೆ ತಂದುಕೊಡುತ್ತಾರೆ. ಮುನ್ನಡೆಯ ಆತ್ಮವಿಶ್ವಾಸದಲ್ಲಿದ್ದ ಭಾರತಕ್ಕೆ ಮಂದೀಪ್ ಸಿಂಗ್ ಒಂಬತ್ತನೇ ನಿಮಿಷದಲ್ಲಿ ಮತ್ತೊಂದು ಗೋಲಿನ ಕಾಣಿಕೆ ನೀಡುತ್ತಾರೆ.
0-3 ಹಿನ್ನಡೆಯ ಒತ್ತಡಕ್ಕೆ ಒಳಗಾದ ಜಪಾನ್ ಮೊದಲ ಕ್ವಾರ್ಟರ್ನ ಕೊನೆಯ ಐದು ನಿಮಿಷದಲ್ಲಿ ಭಾರಿ ಕಾದಾಟ ನಡೆಸಿತು. ಈ ವೇಳೆ ಸಿಕ್ಕ ಪೆನಾಲ್ಟಿ ಕಾರ್ನರ್ ನಲ್ಲಿ ಆತಿಥೇಯರು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾದರು. ಮೊದಲ ಕ್ವಾರ್ಟರ್ ಮುಕ್ತಾಯಕ್ಕೆ ಭಾರತ 3-0 ಮುನ್ನಡೆ ಕಾಯ್ದುಕೊಂಡಿತು.
25ನೇ ನಿಮಿಷದಲ್ಲಿ ಕೆಂಟಾರೊ ಫುಕುಡಾ ಅವರು ಜಪಾನ್ಗೆ ಗೋಲಿನ ಖಾತೆ ತೆರೆಯುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಭಾರತದ ಮಂದೀಪ್ ಸಿಂಗ್ ಅವರು 29 ಮತ್ತು 30ನೇ ನಿಮಿಷದಲ್ಲಿ ಸತತ ಎರಡು ಗೋಲು ಗಳಿಸಿ ಭಾರತದ ಮುನ್ನಡೆಯನ್ನು 5-1 ಕ್ಕೆ ಇಗ್ಗಿಸಿದರು.
ಮೂರನೇ ಕ್ವಾರ್ಟರ್ನಲ್ಲಿ ಜಪಾನ್ ಆಟಗಾರರು ಆಕ್ರಮಣಾಕಾರಿ ಆಟಕ್ಕೆ ಮೊರೆ ಹೋದರು. ಈ ವೇಳೆ ಹೊಡೆದ ಶಾಟ್ ಅನ್ನು ಭಾರತದ ಗೋಲ್ ಕೀಪರ್ ಕೃಷ್ಣನ್ ಪಠಾಕ್ ಅವರು ತಡೆಯುವಲ್ಲಿ ಯಶಸ್ವಿಯಾದರು. ಆದರೂ, ತಮ್ಮ ಹೋರಾಟ ಮುಂದುವರಿಸಿದ ಜಪಾನ್ ತಂಡ ಭಾರತದ ರಕ್ಷಣಾ ವಿಭಾಗದ ಮೇಲೆ ತೀವ್ರ ಒತ್ತಡ ಹೇರಿತು. ಇದರ ಫಲವಾಗಿ 36ನೇ ನಿಮಿಷದಲ್ಲಿ ಕೆಂಟಾ ಟನಕ ಅವರು ಜಪಾನ್ಗೆ ಎರಡನೇ ಗೋಲು ಕೊಡುಗೆಯಾಗಿ ನೀಡಿದರು.
ಜಪಾನ್ ಮೇಲೆ ಹೆಚ್ಚಿನ ಒತ್ತಡ ಹೇರಿದ ಭಾರತಕ್ಕೆ 41ನೇ ನಿಮಿಷದಲ್ಲಿ ಮುಂಚೂಣಿ ಆಟಗಾರ ಗುಜ್ರಂತ್ ಮತ್ತೊಂದು ಗೋಲು ತಂದಿತ್ತರು. ಇದರ ಫಲವಾಗಿ ಭಾರತ ಮೂರನೇ ಕ್ವಾರ್ಟರ್ ಮುಕ್ತಾಯಕ್ಕೆ 6-2 ಮುನ್ನಡೆ ಪಡೆಯಿತು.
ಮತ್ತೊಮ್ಮೆ ಭಾರತದ ರಕ್ಷಣಾ ಕೋಟೆಯ ಮೇಲೆ ಒತ್ತಡ ಹೇರಿದ ಜಪಾನ್, ಕಝುಮಾ ಮುರಾಟ ಅವರ ಸಹಾಯದಿಂದ 52ನೇ ನಿಮಿಷದಲ್ಲಿ ಮೂರನೇ ಗೋಲು ತನ್ನ ಖಾತೆಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಆದರೂ, ಅಂತಿಮವಾಗಿ ಪಂದ್ಯದ ನಿಗದಿತ ಅವಧಿ ಮುಕ್ತಾಯಕ್ಕೆ 6-3 ಅಂತರದಲ್ಲಿ ಭಾರತದ ವಿರುದ್ಧ ಸೋತು ನಿರಾಸೆ ಅನುಭವಿಸಿತು.