ಬೆಂಗಳೂರು,
ಮಾ.29, ಪ್ರತಿದಿನದ ಐದು ಹೊತ್ತಿನ ನಮಾಜನ್ನು ಮುಸ್ಲಿಮರು ಮನೆಯಲ್ಲಿಯೇ
ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಮಸೀದಿಗೆ ತೆರಳುವುದಾಗಲೀ ಅಥವಾ ನೆರೆಹೊರೆಯವರೊಂದಿಗೆ ಒಟ್ಟುಗೂಡಿ ಜಮಾಅತ್ ಸೇರುವುದಾಗಲೀ ಮಾಡಬಾರದು. ಹೀಗೆ
ಮಾಡಿದ್ದಲ್ಲಿ ಇದು ಸರ್ಕಾರದ ಆದೇಶಗಳ ಉಲ್ಲಂಘನೆಯಾಗಿ ಕಾನೂನಿನಡಿ ಶಿಕ್ಷೆಗೆ ಒಳಗಾಗುವ
ಸಂಭವವಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಪ್ರಧಾನ
ಕಾರ್ಯದರ್ಶಿ ಎ.ಬಿ.ಇಬ್ರಾಹೀಂ ಮನವಿ ಮಾಡಿದ್ದಾರೆ. ನಗರದಲ್ಲಿಂದು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ
ಕೊರೋನಾ ಸೋಂಕು ಹರಡದಂತೆ ಸಮಾಜದ ಹಾಗೂ ಈ ದೇಶದ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ
ಅತ್ಯವಶ್ಯಕ ಕೆಲಸವಿದ್ದಲ್ಲಿ ಮಾತ್ರ ಮನೆಯಿಂದ ಹೊರಗೆ ಬರಬೇಕು. ಹೀಗೆ ಮನೆಯಿಂದ ಹೊರಗೆ
ಬಂದರೂ ಸಹ ಅತ್ಯವಶ್ಯಕ ಕೆಲಸವನ್ನು ಪೂರೈಸಿಕೊಂಡು ತಕ್ಷಣ ಮನೆಗೆ ತೆರಳಬೇಕು ಎಂದು
ಸೂಚಿಸಿದರು.ವಿಶೇಷವಾಗಿ ಯುವಕರು ಅನವಶ್ಯಕವಾಗಿ ರಸ್ತೆಯಲ್ಲಿ
ಓಡಾಡುವುದು, ಬೀದಿಗಳಲ್ಲಿ ಗುಂಪು ಸೇರುವುದು, ಬೈಕ್ ಓಡಿಸುವುದು ಮುಂತಾದವುಗಳಿಂದ
ದೂರವಿರಬೇಕು. ಇಂಟರ್ನೆಟ್‌ನಲ್ಲಿ ಯೂಟ್ಯೂಬ್ ಮತ್ತು ವಾಟ್ಸಪ್‌ಗಳಲ್ಲಿ ಬರುವ ಅನವಶ್ಯಕ
ವದಂತಿಗಳ ಕುರಿತು ಇರುವ ಫೋಟೋಗಳನ್ನು ವೀಡಿಯೋಗಳನ್ನು ಹಂಚಿಕೊಳ್ಳಬಾರದು. ಆದಷ್ಟು
ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು. ಆದಷ್ಟು ಸಾಮಾಜಿಕ ಅಂತರವನ್ನು
ಕಾಪಾಡಿಕೊಳ್ಳಬೇಕು. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಗುಂಪುಗೂಡಬಾರದು. ಒಟ್ಟಾರೆಯಾಗಿ
ಸರ್ಕಾರದಿಂದ ಹಾಗೂ ಪೊಲೀಸ್ ಇಲಾಖೆಯಿಂದ ಕಾಲಕಾಲಕ್ಕೆ ನೀಡುವ ನಿರ್ದೇಶನಗಳನ್ನು ಹಾಗೂ
ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಇಬ್ರಾಹೀಂ ಮನವಿ ಮಾಡಿದರು.ಈ
ಮೇಲಿನ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಎಲ್ಲಾ ಮಸೀದಿಗಳ ಆಡಳಿತ ಮಂಡಳಿ ಮಸೀದಿಯ
ಧ್ವನಿವರ್ಧಕಗಳ ಮೂಲಕ ಪ್ರತಿ ದಿನ ಮೂರು ಅಥವಾ ನಾಲ್ಕು ಬಾರಿ ಪ್ರಕಟಿಸಬೇಕು ಎಂದು ಅವರು
ತಿಳಿಸಿದರು.