ಸಿನಿಮೀಯ ಶೈಲಿಯಲ್ಲಿ ವ್ಯಕ್ತಿ ಕೊಲೆ: ಹಳೆ ವೈಷಮ್ಯ ಶಂಕೆ

ಕಲಬುರಗಿ,  ನ. 5:   ಚಲಿಸುತ್ತಿದ್ದ ಕಾರಿಗೆ ಕಾರಿನಿಂದ ಡಿಕ್ಕಿ ಹೊಡೆದು ಬಳಿಕ  ವ್ಯಕ್ತಿಯನ್ನು ಸಿನಿಮೀಯ ಶೈಲಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ  ಕಲಬುರಗಿ ಹೊರವಲಯದ ಸಿರಸಗಿ ಗ್ರಾಮದ ಬಳಿ ಸೋಮವಾರ ತಡರಾತ್ರಿ ನಡೆದಿದೆ. ಶಿವಲಿಂಗ್  ಕೊಲೆಯಾದ ವ್ಯಕ್ತಿ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದ್ದು, ಕೊಲೆಯ  ಹಿಂದೆ ಕಾಂಗ್ರೆಸ್ ಜಿಲ್ಲಾ ಪಂಚಾಯ್ತಿ ಸದಸ್ಯ ಶಾಂತಪ್ಪ ಕೂಡಲಗಿ ಸೇರಿದಂತೆ ಹಲವರ  ಕೈವಾಡವಿದೆ ಎಂದು ಮೃತ ಶಿವಲಿಂಗ್ ಸಂಬಂಧಿಕರು ಆರೋಪಿಸಿದ್ದಾರೆ. ಇತ್ತೀಚೆಗೆ ಗ್ರಾಮದಲ್ಲಿ  ನಡೆದ ಗಲಾಟೆಗೆ ಸಂಬಂಧಿಸಿದಂತೆ ಕೊಲೆಯಾದ ಶಿವಲಿಂಗ್ ಜೈಲಿಗೆ ಹೋಗಿ ಸೋಮವಾರ ಜಾಮೀನಿನ  ಮೇಲೆ ಬಿಡುಗಡೆಯಾಗಿದ್ದ. ಈ ವಿಷಯ ತಿಳಿದು ಶಾಂತಪ್ಪ ಸಂಬಂಧಿಕರು ಮಾರಕಾಸ್ತ್ರಗಳಿಂದ ಶಿವಲಿಂಗ್ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಫರ್ತಾಬಾದ್ ಪೊಲೀಸ್ ಠಾಣೆಯಲ್ಲಿ ಶಾಂತಪ್ಪ ಕೂಡಲಗಿ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.