ಪಶ್ಚಿಮಬಂಗಾಳ ಸರ್ಕಾರದಿಂದ 105 ಹೆಚ್ಚುವರಿ ವಿಶೇಷ ರೈಲುಗಳ ವ್ಯವಸ್ಥೆ-ಮಮತಾ ಬ್ಯಾನರ್ಜಿ

ಕೊಲ್ಕತಾ, ಮೇ 14,ದೇಶದ ವಿವಿಧ ಭಾಗಗಳಲ್ಲಿ ಸಿಲುಕಿರುವ ಜನರ ಸಹಾಯಕ್ಕೆ ರಾಜ್ಯ ಸರ್ಕಾರ 105 ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ‘ದೇಶದ ವಿವಿಧ ಭಾಗಗಳಲ್ಲಿ ಸಿಕ್ಕಿಬಿದ್ದಿರುವ ರಾಜ್ಯದ ಜನರಿಗೆ ನೆರವು ನೀಡುವ ಭರವಸೆಯಂತೆ, ತವರು ರಾಜ್ಯಕ್ಕೆ ವಾಪಸ್ಸಾಗಲು ಬಯಸುವವರಿಗಾಗಿ 105 ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ.’ ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮುನ್ನ ವಲಸೆ ಕಾರ್ಮಿಕರ ಬಗ್ಗೆ ಮಾತನಾಡಿದ ಅವರು, ‘ಸುಮಾರು ಒಂದು ಲಕ್ಷ ವಲಸೆ ಕಾರ್ಮಿಕರು ಈಗಾಗಲೇ ಪಶ್ಚಿಮಬಂಗಾಳಕ್ಕೆ ವಾಪಸ್ಸಾಗಿದ್ದಾರೆ. ಇತರರನ್ನು ವಾಪಸ್‍ ಕರೆ ತರಲು ಇನ್ನೂ 100 ರೈಲುಗಳ ವ್ಯವಸ್ಥೆ ಮಾಡಲಾಗುವುದು. ಯಾರೊಬ್ಬರೂ ಚಿಂತಿಸಬೇಕಾಗಿಲ್ಲ. ದೇಶದ ವಿವಿಧ ಭಾಗಗಳಲ್ಲಿ ಸಿಕ್ಕಿಬಿದ್ದಿರುವ ರಾಜ್ಯದ ವಲಸೆ ಕಾರ್ಮಿಕರನ್ನು ವಾಪಸ್‍ ಕರೆತರಲು ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಪ್ರತಿಯೊಬ್ಬರನ್ನೂ  ರಾಜ್ಯಕ್ಕೆ ಕರೆತರಲಾಗುವುದು.’ ಎಂದು ಹೇಳಿದ್ದರು.