ಬೆಂಗಳೂರು, ನ.30- ಕೆ.ಸಿ.ರಾಮಮೂರ್ತಿ ರಾಜೀನಾಮೆಯಿಂದ ತೆರವಾಗಿರುವ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ವಲಯದಲ್ಲಿ ಚಿಂತನೆ ನಡೆಯುತ್ತಿರುವ ಕುರಿತ ವರದಿಗಳಿಗೆ ಸ್ಪಷ್ಟೀಕರಣ ನೀಡಿರುವ ನೀಡಿರುವ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಖರ್ಗೆ ಕರ್ನಾಟಕದಿಂದ ಸ್ಪರ್ಧಿಸುವುದಿಲ್ಲ. ಬೇರೆ ರಾಜ್ಯದಿಂದ ಸ್ಪರ್ಧಿಸಬಹುದು ಎಂದು ಹೇಳಿದ್ದಾರೆ.
ಯುಎನ್ಐ ಕನ್ನಡ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಅವರು, ಡಿ. 12 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುತ್ತಿಲ್ಲ. ಏಕೆಂದರೆ ಈ ಸ್ಥಾನ ಗೆಲ್ಲುವಷ್ಟು ಸಂಖ್ಯಾಬಲ ಜೆಡಿಎಸ್‌ಗೆ ಇಲ್ಲ. ಸಂಖ್ಯಾಬಲ ಇಲ್ಲದ ಮೇಲೆ ಮಲ್ಲಿಕಾರ್ಜುನ್ ಖರ್ಗೆ ಹೇಗೆ ತಾನೆ ಸ್ಪರ್ಧಿಸಿಯಾರು? ಒಂದು ವೇಳೆ ಅವರು ರಾಜ್ಯಸಭೆಗೆ ಸ್ಪರ್ಧಿಸುವುದಿದ್ದರೆ ಅದು ಕರ್ನಾಟಕದಿಂದಲ್ಲ ಬೇರೆ ರಾಜ್ಯದಿಂದ ಎಂಬ ಸುಳಿವು ನೀಡಿದರು.
ಖರ್ಗೆ ಅವರು ಚುನಾವಣೆಗೆ ಸ್ಪರ್ಧಿಸುವಂತಿದ್ದರೆ ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತೀರ್ಮಾನಿಸಬೇಕು ಎಂದರು.
ಜೂನ್ 6ರಂದು ರಾಜ್ಯಸಭೆಯ 6 ಸ್ಥಾನಗಳಿಗೆ ಚುನಾವಣಾ ಆಯೋಗ ಉಪಚುನಾವಣೆ ಘೋಷಿಸಿದೆ. ಹೀಗಾಗಿ ಈ ಚುನಾವಣೆಯಲ್ಲಿ ಖರ್ಗೆ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿತ್ತು ಎನ್ನಲಾಗಿದೆ.
ಸದ್ಯ ಸಂಖ್ಯಾಬಲ ಇಲ್ಲದ ಕಾರಣ ಹಾಗೂ ಜೆಡಿಎಸ್‌ನಿಂದ ಮೈತ್ರಿ ಸ್ಪಷ್ಟವಾಗದ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಸ್ಪರ್ಧೆಗೆ ನಿರಾಸಕ್ತಿ ತೋರಿದ್ದಾರೆ. ಅಲ್ಲದೇ ಡಿ 9 ರ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗಲಿದೆ. ಪರಿಸ್ಥಿತಿ ನೋಡಿಕೊಂಡು ಜೂನ್ ತಿಂಗಳ ಸ್ಪರ್ಧೆಗೆ ಮಲ್ಲಿಕಾರ್ಜುನ್ ಖರ್ಗೆ ಸಜ್ಜಾಗಲಿದ್ದಾರೆ.
ನಿರ್ಮಲಾ ಸೀತಾರಾಮನ್, ವೆಂಕಯ್ಯ ನಾಯ್ಡು ತಮ್ಮ ಸ್ವರಾಜ್ಯ ಬಿಟ್ಟು ಅನ್ಯರಾಜ್ಯ ಅಂದರೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಿದ್ದಾರೆ. ಹೀಗಾಗಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ದೆಹಲಿಗೆ ಕಳುಹಿಸಲು ನಿರ್ಧರಿಸಿರುವ ಕಾಂಗ್ರೆಸ್ ಹೈಕಮಾಂಡ್, ಮಹಾರಾಷ್ಟ್ರದಿಂದ ಖರ್ಗೆ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ.
ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಪ್ರಹಸನ ಸರ್ಕಾರ ರಚನೆಯನ್ನೆಲ್ಲಾ ನೋಡಿದಾಗ ಬಿಜೆಪಿ ವರ್ಚಸ್ಸು ಕುಸಿತವಾಗಿದೆ. ಅಲ್ಲದೇ ಮಹಾರಾಷ್ಟ್ರ ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಹೆಚ್ಚು ಸ್ಥಾನ ಗಳಿಸಲು ಅಲ್ಲಿನ ಮುಖಂಡರ ಜೊತೆ ಮಲ್ಲಿಕಾರ್ಜುನ ಖರ್ಗೆ ಟೊಂಕಕಟ್ಟಿ ಓಡಾಡಿದ್ದರು. ಜತೆಗೆ ಪಕ್ಷದಲ್ಲಿ ಮೂಲ ಕಾಂಗ್ರೆಸಿಗರ ಕಡೆಗಣನೆ ಮಾಡಲಾಗಿದೆ ಎನ್ನುವ ಆಪಾದನೆಯನ್ನೂ ದೂರ ಮಾಡಬೇಕಾಗಿದೆ. ಈ ಎಲ್ಲಾ ಲೆಕ್ಕಾಚಾರದಡಿ ಮಲ್ಲಿಕಾರ್ಜುನ ಖರ್ಗೆ ಅನ್ನು ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಕಳುಹಿಸಿ ಬಲಹೆಚ್ಚಿಸಿಕೊಳ್ಳುವ ಚಿಂತನೆಯನ್ನು ಕಾಂಗ್ರೆಸ್ ಹೈಕಮಾಂಡ್ ಹೊಂದಿದೆ.