ಮಲೇಷ್ಯಾ ಮಾಸ್ಟರ್ಸ: ಕ್ವಾರ್ಟರ್ ಫೈನಲ್ಗೆ ಸೈನಾ, ಸಿಂಧು

ಕೌಲಾಲಂಪುರ, ಜ 9             ಭಾರತದ ಹಿರಿಯ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಪಿ.ವಿ ಸಿಂಧು ಹಾಗೂ ಸೈನಾ ನೆಹ್ವಾಲ್ ಅವರು ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯ ಕ್ವಾಟರ್  ಫೈನಲ್ ತಲುಪಿದ್ದಾರೆ. ಆದರೆ, ಪುರುಷರ ವಿಭಾಗದಲ್ಲಿ ಸಮೀರ್ ವರ್ಮಾ ಹಾಗೂ ಎಚ್.ಎಸ್ ಪ್ರಣಯ್ ಅವರು ಸೋಲು ಅನುಭವಿಸಿ ಟೂರ್ನಿಯಿಂದ ಹೊರ ನಡೆದಿದ್ದಾರೆ. 

ಗುರುವಾರ 38 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಪ್ರೀ ಕ್ವಾಟರ್ ಫೈನಲ್ಸ್ ಹಣಾಹಣಿಯಲ್ಲಿ ಸೈನಾ ನೆಹ್ವಾಲ್ ಅವರು 25-23, 21-12 ಅಂತರದಲ್ಲಿ ಥಾಯ್ಲೆಂಡ್ ನ   ಎನ್ ಸಿ ಯಂಗ್ ವಿರುದ್ಧ ಗೆದ್ದು ಅಂತಿಮ ಎಂಟರ ಘೆಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ. 

ಮತ್ತೊಂದು ಮಹಿಳೆಯರ ಸಿಂಗಲ್ಸ್ ಅಂತಿಮ 16ರ ಹಂತದ ಪಂದ್ಯದಲ್ಲಿ ಪಾರಮ್ಯ ಮೆರೆದ ಒಲಿಂಪಿಕ್ಸ್ ಬೆಳ್ಳಿ ಪಶಸ್ತಿ ವಿಜೇತೆ ಪಿ.ವಿ ಸಿಂಧು ಅವರು ವಿಶ್ವದ 19ನೇ ಅಯಾ ಒಹೊರಿ ವಿರುದ್ಧ 21-19, 21-15 ಅಂತರದಲ್ಲಿ ಗೆದ್ದು ಕ್ವಾಟರ್  ಫೈನಲ್ ಗೆ ತಲುಪಿದರು.

  2019ರ ವರ್ಷದಲ್ಲಿ ನೀರಸ ಪ್ರದರ್ಶನ ತೋರಿದ್ದ ಸೈನಾ ನೆಹ್ವಾಲ್ 2020ರ ವರ್ಷದಲ್ಲಿ ಕ್ವಾಟರ್ ಫೈನಲ್ ತಲುಪುವ ಮೂಲಕ ಶುಭಾರಂಭ ಮಾಡಿದ್ದು, ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದಾರೆ. ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಮುಂದಿನ ಸುತ್ತಿನಲ್ಲಿ ಸ್ಪೇನ್ನ ಕರೋಲಿನ್ ಮರಿನ್ ವಿರುದ್ಧ ಕಠಿಣ ಸವಾಲು ಎದುರಿಸಲಿದ್ದಾರೆ. 

ಪುರುಷರ ಸಿಂಗಲ್ಸ್ ಹಣಾಹಣಿಯಲ್ಲಿ ಸಮೀರ್ ವರ್ಮಾ ಅವರು ಮಲೇಷ್ಯಾ ಆಟಗಾರ ಲೀ ಝೀ ಜಿಯಾ ಅವರ ವಿರುದ್ಧ 19-21, 20-22 ಅಂತರದಲ್ಲಿ ಸೋತು ಟೂರ್ನಿಯಿಂದ ಹೊರ ನಡೆದರು. ಎರಡೂ ಗೇಮ್ ಗಳಲ್ಲಿ ಭಾರಿ ಫೈಪೋಟಿ ನೀಡಿದ ಭಾರತದ ಆಟಗಾರ  ಕೊನೆಯಲ್ಲಿ ಸಣ್ಣ ಅಂತರದಲ್ಲಿ ಸೋತು ನಿರಾಸೆ ಅನುಭವಿಸಿದರು. 

ಮತ್ತೊಂದು ಪುರುಷರ ಸಿಂಗಲ್ಸ್ ಹಣಾಹಣಿಯಲ್ಲಿ  ಎಚ್.ಎಸ್ ಪ್ರಣಯ್ ಅವರು 21-14, 21-16 ಅಂತರದಲ್ಲಿ ಜಪಾನ್ನ ಹಿರಿಯ ಆಟಗಾರರಾದ ಕೆಂಟೊ ಮೊಮೊಟಾ ಅವರ ವಿರುದ್ಧ  45 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸೋಲು ಅನುಭವಿಸಿದರು.