ಕೊಚ್ಚಿ, ಸೆ 17 ಮಲಯಾಳಂ ಚಲನಚಿತ್ರ ರಂಗದ ಪ್ರಸಿದ್ಧ ನಟ ಸತ್ತಾರ್ ದೀರ್ಘಕಾಲದ ಅನಾರೋಗ್ಯದಿಂದ ಮಂಗಳವಾರ ಬೆಳಗ್ಗಿನ ಜಾವ ಇಲ್ಲಿನ ಆಲುವಾ ಪಲ್ಲಿಯಾಟಿವ್ ಕೇರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅವರಿಗೆ 67 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ 3.50 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ. ಪುತ್ರ ಕೃಷ್ ಜೆ ಸತ್ತಾರ್ ಅವರನ್ನು ಅಗಲಿದ್ದಾರೆ. ನಟಿ ಜಯಭಾರತಿ ಅವರು ಸತಾರ್ ಅವರ ಮಾಜಿ ಪತ್ನಿ. ನಿಧನದ ಸಂದರ್ಭದಲ್ಲಿ ಜಯಭಾರತಿ ಮತ್ತು ಪುತ್ರ ಆಸ್ಪತ್ರೆಯಲ್ಲಿ ಇದ್ದರು.
1975ರಲ್ಲಿ ಕೃಷ್ಣನ್ ನಾಯರ್ ಅವರ ನಿರ್ದೇಶಿಸಿದ "ಭಾರ್ಯಯೇ ಅವಶ್ಯಮುಂಡು' ಎಂಬ ಚಿತ್ರದಲ್ಲಿ ಸತ್ತಾರ್ ಚಿತ್ರರಂಗಕ್ಕೆ ಚೊಚ್ಚಲ ಪ್ರವೇಶ ಮಾಡಿದರು. 1976ರಲ್ಲಿ ವಿನ್ಸೆಂಟ್ ಮಾಸ್ಟರ್ ಅವರು ನಿರ್ದೇಶಿಸಿದ "ಅನಾವರಣಂ' ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡರು.
ಬಳಿಕ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡ ಸತಾರ್ ಬಳಿಕ ಯಶಸ್ವಿ ಖಳ ನಾಯಕನ ಪಾತ್ರದಲ್ಲಿ ಮಿಂಚಿದರು. ಮಾತ್ರವಲ್ಲ ಪೋಷಕ ನಟನಾಗಿಯೂ ಯಶಸ್ವಿಯಾಗಿದ್ದರು.
80ರ ದಶಕದಲ್ಲಿ ತಮಿಳು ಚಿತ್ರದಲ್ಲೂ ಪ್ರಮುಖ ಪಾತ್ರಗಳ ಅಭಿನಯ ಮಾಡಿದ್ದ ಅವರು, ತಮಿಳಿನ ಮಯಿಲ್, ಸೌಂದರ್ಯಮೆ ವರುಗ ವರುಗಾ ಚಿತ್ರಗಳಲ್ಲಿ ಯಶಸ್ವಿಯಾಗಿ ಅಭಿನಯಿಸಿದ್ದಾರೆ. ತಮಿಳು, ತೆಲುಗು ಸೇರಿದಂತೆ 300ಕ್ಕೂ ಅಧಿಕ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. 150ಕ್ಕೂ ಅಧಿಕ ಮಲಯಾಳಂ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. 2014ರಲ್ಲಿ ಬಿಡುಗಡೆಯಾದ 'ಪರಯಾನ್ ಬಾಕಿವೆಚ್ಚದ್' ಅವರ ಕೊನೆಯ ಚಿತ್ರವಾಗಿದೆ. 3 ದಶಕಗಳ ಕಾಲ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದರು.
ಎರ್ನಾಕುಲಂನ ಅಲುವಾದ ಕೊಡುಂಗಲ್ಲೂರಿನಲ್ಲಿ ಖಾದರ್ ಪಿಳ್ಳೈ ಮತ್ತು ಫಾತಿಮಾ ದಂಪತಿಗೆ ಜನಿಸಿದ ಹತ್ತು ಮಕ್ಕಳಲ್ಲಿ ಸತಾರ್ ಒಂಬತ್ತನೇಯವರಾಗಿದ್ದಾರೆ. ತಂದೆ ಜಮೀನುದಾರ ಮತ್ತು ತಾಯಿ ಗೃಹಿಣಿಯಾಗಿದ್ದರು.
ಅವರು ಪಶ್ಚಿಮ ಕೊಡುಂಗಲ್ಲೂರ್ ಅಲುವಾದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. ಬಳಿಕ ಅಲುವಾದ ಯೂನಿಯನ್ ಕ್ರಿಶ್ಚಿಯನ್ ಕಾಲೇಜಿನಿಂದ ಇತಿಹಾಸದಲ್ಲಿ ಎಂ.ಎ.ಸ್ನಾತಕೋತ್ತರ ಪದವಿ ಪಡೆದರು.
ಕೊಡುಂಗಲ್ಲೂರು ಜುಮಾ ಮಸೀದಿಯಲ್ಲಿ ಇಂದು ಸಂಜೆ ಅವರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.