ಫೆ 11 ರಂದು ನಡೆಯುವ ಗ್ಯಾರೆಂಟಿ ಯೋಜನೆಗಳ ಕಾರ್ಯಗಾರ ಯಶಸ್ವಿಗೊಳಿಸಿ : ಸತೀಶ್ ನಾಯ್ಕ

ಫೆ 11 ರಂದು ನಡೆಯುವ ಗ್ಯಾರೆಂಟಿ ಯೋಜನೆಗಳ ಕಾರ್ಯಗಾರ ಯಶಸ್ವಿಗೊಳಿಸಿ : ಸತೀಶ್ ನಾಯ್ಕ Make the workshop on guarantee schemes to be held on February 11 a success: Satish Naik

ಕಾರವಾರ, ಫೆ.6 : ಫೆಬ್ರವರಿ 11 ರಂದು ಹೊನ್ನಾವರದ ಗುಣವಂತೆಯ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯುವ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಕಾರ್ಯಾಗಾರ ಮತ್ತು ಉತ್ಸವವನ್ನು ಅತ್ಯಂತ ಯಶಸ್ವಿಯಾಗಿ ಆಯೋಜನೆ ಮಾಡಲು ಎಲ್ಲಾ ಇಲಾಖೆಗಳು ಕಾರ್ಯ ನಿರ್ವಹಿಸುವಂತೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ಪಾಂಡುರಂಗ ನಾಯ್ಕ ತಿಳಿಸಿದರು. 

ಅವರು ಶುಕ್ರವಾರ, ಹೊನ್ನಾವರದ ಗುಣವಂತೆಯ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಮಟ್ಟದ ಕಾರ್ಯಾಗಾರ ಮತ್ತು ಉತ್ಸವ ಆಯೋಜನೆಯ ಪೂರ್ವಭಾವಿ ಸಿದ್ಧತೆಗಳ ಪರೀಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಸಭಾಂಗಣದಲ್ಲಿ ಫಲಾನುಭವಿಗಳಿಗೆ ಸೂಕ್ತ ಆಸನ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದ ಅವರು ಎಲ್ಲಾ ಫಲಾನುಭವಿಗಳು ನಿಗಧಿತ ಅವಧಿಯೊಳಗೆ ಸಭಾಂಗಣಕ್ಕೆ ಆಗಮಿಸುವ ರೀತಿಯಲ್ಲಿ ವಾಹನಗಳ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದರು. 

 ಕಾರ್ಯಾಗಾರದ ಯಶಸ್ಸಿಗಾಗಿ ರಚಿಸಲಾಗಿರುವ ಶಿಷ್ಠಾಚಾರ ಪಾಲನೆ ಮತ್ತು ಆಹ್ವಾನ ಪತ್ರಿಕೆ ಉಸ್ತುವಾರಿ ಸಮಿತಿ, ವೇದಿಕೆ ನಿರ್ಮಾಣ ಹಾಗೂ ಆಸನ ಕಲ್ಪಿಸುವ ಉಸ್ತುವಾರಿ ಸಮಿತಿ, ಆಹಾರ ಮತ್ತು ಕುಡಿಯುವ ನೀರು ಉಸ್ತುವಾರಿ ಸಮಿತಿ, ಸ್ವಚ್ಛತೆ ಹಾಗೂ ಮೂಲಭೂತ ಸೌಕರ್ಯ ಉಸ್ತುವಾರಿ ಸಮಿತಿ, ಬ್ಯಾನರ್ ಪೋಸ್ಟರ್ ಅಳವಡಿಕೆ ಪ್ರಚಾರ ಮತ್ತು ಫಲಾನುಭವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಹ್ವಾನಿಸುವ ಕುರಿತ ಉಸ್ತುವಾರಿ ಸಮಿತಿ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನಿರೂಪಣಾ ಉಸ್ತುವಾರಿ ಸಮಿತಿ, ಸಭಾಂಗಣದ ಅಲಂಕಾರ ಉಸ್ತುವಾರಿ ಸಮಿತಿ, ಮಳಿಗೆಗಳಿಗೆ ಜಾಗ ಕಲ್ಪಿಸುವ ಉಸ್ತುವಾರಿ ಸಮಿತಿಗಳ ವತಿಯಿಂದ ಇವರೆಗೆ ಕೈಗೊಂಡಿರುವ ಕ್ರಮಗಳನ್ನು ಪರೀಶೀಲಿಸಿದ ಅವರು, ಎಲ್ಲಾ ಸಮಿತಿಗಳ ಅಧಿಕಾರಿಗಳು ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಯುವ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಿದರು. 

 ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದೀಲೀಷ್ ಶಶಿ ಮಾತನಾಡಿ, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ವಾಹನಗಳಿಗೆ ಸೂಕ್ತ ಪಾಕಿಂರ್ಗ್ ವ್ಯವಸ್ಥೆ ಮತ್ತು ಸಂಚಾರ ದಟ್ಟನೆ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಆಗಮಿಸುವ ಎಲ್ಲಾ ಫಲಾನುಭವಿಗಳಿಗೆ ಸಸಿಗಳನ್ನು ನೀಡುವಂತೆ ತಿಳಿಸಿದರು. 

ಸಭೆಯಲ್ಲಿ ಹೊನ್ನಾವರ ತಹಶೀಲ್ದಾರ ಪ್ರವೀಣ್ ಕೆರಾಂಡೆ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ನಾಗರಾಜ ಮುರ್ಡೇಶ್ವರ, ಹೊನ್ನಾವರ ತಾಲೂಕು ಅಧ್ಯಕ್ಷ ಅಣ್ಣಪ್ಪ ಮಹಾಬಲೇಶ್ವರ ನಾಯ್ಕ, ಭಟ್ಕಳ ಅಧ್ಯಕ್ಷ ರಾಜು ಮಂಜಪ್ಪ ನಾಯ್ಕ, ಕುಮಟಾ ಅಧ್ಯಕ್ಷ ಅಶೋಕ ಕೃಷ್ಣಗೌಡ, ಜಿ.ಪಂ. ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮ ನವರ್, ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತಾ, ಯೋಜನಾ ನಿರ್ದೇಶಕ ಕರೀಂ ಅಸಾದಿ ಹಾಗೂ ಗ್ಯಾರಂಟಿ ಯೋಜನೆಗಳ ಸಂಬಂಧಿತ ಎಲ್ಲಾ ಇಲಾಖಾಧಿಕಾರಿಗಳು ಇದ್ದರು.