ಕಾರವಾರ, ನ.27: ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿ ಕಟ್ಟಡಗಳ ಮೇಲ್ಚಾವಣಿ ಮೇಲೆ ಸೋಲಾರ್ ಘಟಕಗಳನ್ನು ಸ್ಥಾಪಿಸುವ ಮೂಲಕ ಜಿಲ್ಲೆಯನ್ನು ರಾಜ್ಯದಲ್ಲಿಯೇ ಮಾದರಿ ಸೋಲಾರ್ ಜಿಲ್ಲೆಯಾಗಿ ಮಾಡುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ತಕ್ಷಣದಿಂದಲೇ ಕಾರ್ಯೊನ್ಮುಖರಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಅಹಮದ್ ಮುಲ್ಲಾ ಹೇಳಿದರು.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಂಪ್ರದಾಯಿಕ ವಿದ್ಯುತ್ ಮೂಲಗಳು ಕಾಲಕ್ರಮೇಣ ನಶಿಸಲಿದ್ದು , ಸೂರ್ಯಶಕ್ತಿಯಿಂದ ದೊರೆಯುವ ವಿದ್ಯುತ್ ಗೆ ಯಾವುದೇ ಮೊತ್ತವನ್ನು ಪಾವತಿಸಬೇಕಾಗಿಲ್ಲ ಆದ್ದರಿಂದ ವಿದ್ಯುತ್ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಜಿಲ್ಲೆಯ ಸರಕಾರಿ ಕಚೇರಿಗಳು ಸಾರ್ವಜನಿಕರಿಗೆ ಮಾದರಿಯಾಗಿ ತಮ್ಮ ಕಟ್ಟಡಗಳ ಮೇಲ್ಚಾವಣಿಯಲ್ಲಿ ಸೋಲಾರ್ ಘಟಕಗಳನ್ನು ಅಳವಡಿಸಿಕೊಳ್ಳುವ ಕುರಿತಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಜಿಲ್ಲೆಯ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ಕಂದಾಯ ಇಲಾಖೆ, ಪೊಲೀಸ್ ಇಲಾಖೆ , ಶಾಲೆಗಳು, ಅಂಗನವಾಡಿಗಳು, ಪ್ರಾಥಮಿಕ ಆರೋಗ್ಯ ಕೆಂದ್ರಗಳು ಸೇರಿದಂತೆ ಎಲ್ಲಾ ಕಟ್ಟಡಗಳ ಮತ್ತು ಮೇಲ್ಚಾವಣಿಯ ಸ್ಥಿತಿಗತಿ ಕುರಿತಂತೆ ಸಂಬಂದಪಟ್ಟ ಅಧಿಕಾರಿಗಳು 15 ದಿನದಲ್ಲಿ ಸಮಗ್ರ ವರದಿ ನೀಡುವಂತೆ ತಿಳಿಸಿದ ಅಪರ ಜಿಲ್ಲಾಧಿಕಾರಿಗಳು ಈ ವರದಿಗಳನ್ನು ಪರೀಶೀಲಿಸಿ ಈ ಕಟ್ಟಡಗಳ ಮೇಲ್ಚಾವಣಿಯಲ್ಲಿ ಸೋಲಾರ್ ಘಟಕಗಳನ್ನು ಅಳವಡಿಸುವ ಕುರಿತಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿಖರ ಮಾಹಿತಿ ಸಿದ್ದಪಡಿಸುವಂತೆ ಸೂಚನೆ ನೀಡಿದರು.
ಎಲ್ಲಾ ತಾಲೂಕುಗಳ ತಹಸೀಲ್ದಾರರು, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು , ಲೋಕೊಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಹೆಸ್ಕಾಂ ಇಲಾಖೆಯ ಅಧಿಕಾರಿಗಳು ತಾಲೂಕು ಮಟ್ಟದಲ್ಲಿ ಮಾಹಿತಿಯನ್ನು ಕ್ರೂಢೀಕರಿಸುವಂತೆ ತಿಳಿಸಿದರು.
ಜಿಲ್ಲೆಯ ಎಲ್ಲಾ ಸರಕಾರಿ ಕಟ್ಟಡಗಳ ಸಮಗ್ರ ಮಾಹಿತಿ ಸಿದ್ದಗೊಂಡ ನಂತರ ಹೆಸ್ಕಾಂ ಇಲಾಖೆವತಿಯಿಂದ ಕಟ್ಟಡಗಳ ಮೇಲ್ಚಾವಣಿಯಲ್ಲಿ ಸೋಲಾರ್ ಘಟಕಗಳನ್ನು ಅಳವಡಿಸುವ ಬಗ್ಗೆ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೋಲಾರ್ ಅಳವಡಿಸಲು ಮುಂದಿನ ಕ್ರಮ ಕೈಗೊಳ್ಳುವಂತೆ ತಿಳಿಸಿದ ಅವರು, ಈ ಕಾರ್ಯದಲ್ಲಿ ಎಲ್ಲಾ ಅಧಿಕಾರಿಗಳು ಅಗತ್ಯ ಸಹಕಾರ ನೀಡುವ ಮೂಲಕ ಜಿಲ್ಲೆಯನ್ನು ಮಾದರಿ ಸೋಲಾರ್ ಜಿಲ್ಲೆಯನ್ನಾಗಿ ರೂಪಿಸಬೇಕು ಎಂದರು.
ಸೋಲಾರ್ ವಿದ್ಯುತ್ ಯೋಜನೆಗೆ ಸಂಬಂದಿಸಿದಂತೆ ಜಿಲ್ಲೆಯ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಸೋಲಾರ್ ಅಳವಡಿಕೆ ಯೋಜನೆ, ಮಾದರಿ ಸೌರ ಗ್ರಾಮ ಯೋಜನೆ, ಪ್ರತಿ ಮನೆಗಳ ಮೇಲೆ ಸೋಲಾರ್ ಅಳವಡಿಸುವ ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜಲಿ ಯೋಜನೆ ಗಳ ಕುರಿತಂತೆ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸುವಂತೆ ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗಿಸ್, ಹೆಸ್ಕಾಂ ನ ಅಧೀಕ್ಷ-ಕ ಇಂಜಿನಿಯರ್ ದೀಪಕ್ ಕಾಮತ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.