ಲೋಕದರ್ಶನವರದಿ
ಮಹಾಲಿಂಗಪುರ: ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡದೇ ಒಳ್ಳೆಯ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕೃತಿ-ಸಂಸ್ಕಾರವನ್ನು ಕಲಿಸುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿರಿ ಎಂದು ಹುಬ್ಬಳ್ಳಿಯ ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.
ಬುಧವಾರ ಪಟ್ಟಣದ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಚಿಣ್ಣರ ಹಬ್ಬ, ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಹಾಗೂ 2019-20ನೇ ಸಾಲಿನ ವಿಜ್ಞಾನ ವಸ್ತುಪ್ರದರ್ಶನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ಜಗತ್ತಿಗೆ ಮಾದರಿಯಾದ ಸಂಸ್ಕೃತಿಯನ್ನು ಹೊಂದಿದ ನಮ್ಮ ಭಾರತ ದೇಶದಲ್ಲಿ ಇತ್ತಿಚಿಗೆ ಪಾಶ್ಚಿಮಾತ್ಯ ದೇಶಗಳ ವ್ಯಾಮೋಹಕ್ಕೆ ಒಳಗಾಗಿ ನಮ್ಮ ಸಂಸ್ಕೃತಿಯು ಮರೆಯಾಗುತ್ತಿರುವದು ಖೇದಕರ ಸಂಗತಿ.
ಪಾಲಕರು ಮಕ್ಕಳನ್ನು ಮೋಬೈಲ ಸಂಸ್ಕೃತಿಯಿಂದ ದೂರವಿಡಬೇಕು. ಜಗತ್ತಿನಲ್ಲಿ ತಾಯಿ ಶಕ್ತಿಗೆ ಹೆಚ್ಚಿನ ಬೆಲೆ ಇರುವದರಿಂದ ಎಲ್ಲಾ ತಾಯಂದಿರು ಜೀಜಾಬಾಯಿ-ಛತ್ರಪತಿ ಶಿವಾಜಿಯಂತಹ ಮಾದರಿ ತಾಯಿ-ಮಕ್ಕಳಾಗಿ ದೇಶದ ಸಂಸ್ಕೃತಿಯನ್ನು ಉಳಿಸಬೇಕಾಗಿದೆ. ಸತ್ಯವನ್ನು ಹೇಳುವದು-ಧರ್ಮದಿಂದ ನಡೆಯುವದು ನಮ್ಮ ದೇಶದ ಸಂಸ್ಕೃತಿಯಾಗಿದೆ. ಈ ದಿಶೆಯಲ್ಲಿ ಪಾಲಕರು, ಶಿಕ್ಷಕರು, ಮಕ್ಕಳನ್ನು ಬೆಳೆಸಬೇಕಾಗಿದೆ ಎಂದರು.
ಸಸಿಗೆ ನೀರುಣಿಸುವ ಮೂಲಕ ಚಿಣ್ಣರ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಧೋಳ ಕ್ಷೇತ್ರಶಿಕ್ಷಣಾಧಿಕಾರಿ ಮಹಾಂತೇಶ ನರಸನಗೌಡ್ರ ಮಾತನಾಡಿ ಮಕ್ಕಳನ್ನು ಅಂಕಗಳಿಸುವ ಮಸೀನನಂತೆ ಮಾಡದೇ, ಅವರಿಗೆ ಸ್ವತಂತ್ರವಾಗಿ ಓದುಲು ಬಿಟ್ಟು, ಇಂತಹ ಕಾರ್ಯಕ್ರಮಗಳ ಮೂಲಕ ಅವರಲ್ಲಿನ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿ ಬೆಳೆಸಬೇಕಾಗಿದೆ ಎಂದರು.
ಮೋಡಿಲಿಪಿ ತಜ್ಞ ಡಾ. ಸಂಗಮೇಶ ಕಲ್ಯಾಣಿ ಮಾತನಾಡಿ ಭಾರತ ದೇಶದಲ್ಲಿ ಸಂಸ್ಕೃತಿ ಇದೆ, ಆದರೆ ಸಂಸ್ಕೃತಿಯಲ್ಲಿ ಭಾರತ ದೇಶ ಇಲ್ಲದೇ ಇರುವದೇ ವಿಷಾದನೀಯ. ಇಂದಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಹೃದಯ ಶ್ರೀಮಂತಿಕೆ ಮತ್ತು ಅಧ್ಯಾತ್ಮದ ಸಂಸ್ಕಾರ ಕೊಡಿಸಬೇಕಾಗಿದೆ. ಶಿಕ್ಷಕರು ಸಹ ಬೋಧನೆಯ ಜೊತೆಗೆ ನಿರಂತರ ಅಧ್ಯಯನ ಮಾಡಬೇಕು, ಕ್ರೀಯಾಶೀಲರಾಗಿರಬೇಕು. ಮಕ್ಕಳ ವ್ಯವಕ್ತಿತ್ವ ವಿಕಸನಕ್ಕೆ ಶಿಕ್ಷಕರ ಜೊತೆಗೆ ಪಾಲಕರ ಜವಾಬ್ದಾರಿಯು ಮುಖ್ಯವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಶಶಿಧರ ಕುಂಬಾರ ಮಾತನಾಡಿದರು. ಶಾಲಾ ಮುಖ್ಯಗುರುಮಾತೆ ಆರ್.ಎ.ಬನ್ನೂರ(ಗೋಲಭಾಂವಿ) ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಜಿಯವರನ್ನು ಶಾಲೆಯವತಿಯಿಂದ ಸನ್ಮಾನಿಸಲಾಯಿತು.
ಕೆಎಲ್ಇ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಬಸಪ್ಪ ಬಂತಿ ಅಧ್ಯಕ್ಷತೆವಹಿಸಿದ್ದರು. ಪತ್ರಕರ್ತ ಚಂದ್ರಶೇಖರ ಮೋರೆ, ಕೆಎಲ್ಇ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಡಾ. ಪ್ರವೀಣ ಪಶ್ಚಾಪೂರ, ಸಂತೋಷ ಹುದ್ದಾರ, ಶಿಕ್ಷಕರಾದ ಆಯ್.ಆಯ್.ಕೋರಿ, ಜೆ.ಎಸ್.ಹಿರೇಮಠ, ಕೆ.ಎಂ.ಹುನಗುಂದ, ಎಸ್.ಎಸ್.ನೀಲಿ, ಬಿ.ಎಸ್.ಜೇಡರ, ಕು. ಡಿ.ಎಚ್.ಸಾಳುಂಕೆ, ಎಸ್.ಎಂ.ಪತ್ತಾರ, ಆರ್.ಬಿ.ಪಶ್ಚಾಪೂರ ಸೇರಿದಂತೆ ಹಲವರು ಇದ್ದರು.