ತಾಲೂಕ ಕಚೇರಿಯಲ್ಲಿ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ


ಶಿರಹಟ್ಟಿ 14: ಹಲವಾರು ವರ್ಷಗಳಿಂದ ಅಡ್ಡಾದಿಟ್ಟಿ ವಾಹನ ನಿಲ್ಲಿಸಿ ತಾಸುಗಟ್ಟಲೇ ತಮ್ಮ ತಮ್ಮ ವೈಯಕ್ತಿಕ ಕೆಲಸಗಳಿಗೆ ಹೋಗಲು ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಸುಗಮ ಸಂಚಾರಕ್ಕೆ ತಲೆನೋವಿಗೆ ಕಾರಣವಾದ ಪಾರ್ಕಿಂಗ್ ವ್ಯವಸ್ಥೆಗೆ ಅಂತೂ ಪರಿಹಾರ ದೊರಕಿದಂತಾಗಿದೆ.

ಅದು ಪಟ್ಟಣದ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ತಾಲೂಕಾಡಳಿತ ಕಚೇರಿ, ಈ ಆವರಣದಲ್ಲಿ ವಿವಿಧ ಕೆಲಸ ಕಾರ್ಯಗಳಿಗೆ ಆಗಮಿಸುವ ಜನರ ವಾಹನ ನಿಲುಗಡೆಗೆ (ಪಾರ್ಕಿಂಗ್ ) ಸುಸಜ್ಜಿತವಾದ ವ್ಯವಸ್ಥೆ ಮಾಡಿರುವದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಶಿರಹಟ್ಟಿ ಪಟ್ಟಣದಲ್ಲಿ ಬಹುತೇಕ ಯಾವ ಜಾಗದಲ್ಲಿಯೂ ಇದುವರೆಗೆ ಇಲ್ಲಿ ನಿಮ್ಮ ವಾಹನಗಳನ್ನು ನಿಲ್ಲಿಸಿ ಎಂಬ ಅಧಿಕೃತ ಬರಹವಿರುವ ಪಾರ್ಕಿಂಗ್ ವ್ಯವಸ್ಥೆ ಇದ್ದಿರಲಿಲ್ಲ. ಇದೇ ಮೊದಲ ಬಾರಿಗೆ ತಾಲೂಕ ಕಚೇರಿ ಆವರಣದಲ್ಲಿ ಬೈಕ್ ಹಾಗೂ ಕಾರುಗಳ ನಿಲುಗಡೆಗೆ ಪ್ರತ್ಯಕ ವ್ಯವಸ್ಥೆ ಕಲ್ಪಿಸಲಾಗಿದೆ. ಮತ್ತು ಸಾರ್ವಜನಿಕರು ಬೇಕಾಬಿಟ್ಟಿ ತಮ್ಮ ವಾಹನಗಳನ್ನು ನಿಲ್ಲಿಸದಂತೆ ಎಚ್ಚರಿಕೆ ನೀಡಲು ಓರ್ವ ಹೋರ್ಮ ಗಾರ್ಡ್  ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ. ಆದ್ದರಿಂದ ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣವರ ಈ ಕ್ರಮ ಸಾರ್ವಜನಿಕರ ಪ್ರಸಂಸೆಗೆ ಕಾರಣವಾಗಿದೆ.

ಪಟ್ಟಣದ ಬಹುತೇಕ ಅಂಗಡಿಗಳು ಹಾಗೂ ಖಾಸಗಿ ಕಟ್ಟಡಗಳು ರಸ್ತೆಗೆ ತಾಗಿಕೊಂಡೆ ಇರುತ್ತವೆ. ಉಳಿದವರಿಗೆ ಒಂದೆಡೆ ಇರಲಿ ಸ್ವತಃ ಅಂಗಡಿ ಮಾಲಿಕರ ಮತ್ತು ಕಾರ್ಮಿಕರ ವಾಹನ ನಿಲುಗಡೆಗೂ ಅಂಗಡಿಯ ಮುಂದೆ ವ್ಯವಸ್ಥೆ ಇಲ್ಲದಿರುವದು ವಿಪರ್ಯಾಸ. ಕಾರಣ ಸಾರ್ವಜನಿಕರು ಮಾರ್ಕೆಟ್ನಲ್ಲಿ ಎಲ್ಲೆಂದರಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತದೆ. ಈ ಅನಿಷ್ಟ ಪದ್ದತಿ ಈವರೆಗೆ ತಾಲೂಕ ಕಚೇರಿಯಲ್ಲಿಯೂ ಕೂಡಾ ಕಂಡು ಬರುತ್ತಿತ್ತು. ಕಚೇರಿ ಆವರಣದಲ್ಲಿ ಕಾರುಗಳು ಬೈಕಗಳು ಎಲ್ಲೆಂದರಲ್ಲಿ ನಿಲ್ಲಿಸಲಾಗುತಿತ್ತು. ಇದೇನು ತಾಲೂಕ ಕಚೇರಿಯೋ ಅಥವಾ ಸಂತೆ ಮಾರುಕಟ್ಟೆಯೋ ಎಂಬಂತೆ ಭಾಸವಾಗುತ್ತಿತ್ತು. ಆದರೆ ಕಳೆದೆರಡು ದಿನಗಳಿಂದ ವಾಹನಗಳಿಗೆ ಪಾಕರ್ಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು ಕಚೇರಿಯ ಆವರಣ ಸುಂದರ ಮತ್ತು ಅಚ್ಚುಕಟ್ಟಾಗಿ ಕಾಣಲಾರಂಭಿಸಿದೆ.

ಇನ್ನಾದರೂ ಪಟ್ಟಣ ಪಂಚಾಯತಿಯವರು ಎಚ್ಚೆತ್ತುಕೊಂಡು ಹೊಸ ಕಟ್ಟಡಗಳ ಪರವಾನಿಗೆ ನೀಡುವಾಗ ಕಡ್ಡಾಯವಾಗಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇದ್ದರೆ ಮಾತ್ರ ಅನುಮತಿ ನೀಡುವದು ಸೂಕ್ತ ಮತ್ತು ಪೋಲಿಸ್ ಇಲಾಖೆ ಅವರು ಪಟ್ಟಣದಲ್ಲಿ ಬೇಕಾಬಿಟ್ಟಿ ನಿಲ್ಲುವ ವಾಹನಗಳಿಗೆ ಕನಿಷ್ಠ ವಾರದ ಮೂರು ದಿನ ಒಂದು ಕಡೆ ಮತ್ತೆ ಮೂರು ದಿನ ಇನ್ನೊಂದು ಕಡೆ ವಾಹನಗಳು ನಿಲ್ಲುವಂತೆ ಕ್ರಮ ಕೈಗೊಳ್ಳಬೇಕು ಎಂಬುವದು ಜನರ ಅನಿಸಿಕೆಯಾಗಿದೆ. ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣವರ ಮುಖಾಂತರ ತಾಲೂಕ ಕಚೇರಿ ಸುಂದರವಾಗಿ ಕಂಡಂತೆ ಸಂಬಂಧಪಟ್ಟ ಇಲಾಖೆಗಳ ಸೂಕ್ತ ಕ್ರಮದಿಂದ ಒಂದು ದಿನ ಪಟ್ಟಣವು ಸುಂದರವಾಗಿ ಕಾಣಬಹುದು ಎಂಬ ಆಸೆ ಸಾರ್ವಜನಿಕರದ್ದಾಗಿದೆ.