ಲೋಕದರ್ಶನ ವರದಿ
ರಾಯಬಾಗ 22: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಜಮೀನುಗಳಿಂದ ಅಪಾರ ಪ್ರಮಾಣದಲ್ಲಿ ನೀರು ರಸ್ತೆ ಮೇಲೆ ಬಂದು ಮಂಗಳವಾರ ಬೆಳಿಗ್ಗೆ ಚಿಂಚಲಿ-ರಾಯಬಾಗ ಮುಖ್ಯ ರಸ್ತೆಯ ಹಾಲಹಳ್ಳದ ಸೇತುವೆ ಜಲಾವೃತಗೊಂಡು ಸಂಚಾರ ಬಂದ್ ಆಗಿದೆ. ನೀರು ಹರಿಯುವ ರಭಸಕ್ಕೆ ಸೇತುವೆಯ ತಡೆಗೋಡೆ ಕೊಚ್ಚಿ ಹೋಗಿದೆ.
ಸೇತುವೆ ಜಲಾವೃತದಿಂದಾಗಿ ಕುಡಚಿ, ಸಿದ್ದಾಪೂರ, ಖೇಮಲಾಪೂರ, ಪರಮಾನಂದವಾಡಿ, ಸುಟ್ಟಟ್ಟಿ, ನಿಲಜಿ, ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತಾಲೂಕು ಕೇಂದ್ರ ರಾಯಬಾಗಕ್ಕೆ ಹೋಗಲು ತೊಂದರೆಯಾಗಿದೆ. ಚಿಂಚಲಿ ಗ್ರಾಮಸ್ಥರು ಸೇತುವೆ ಮೂಲಕ ಸಾಗಿದರೆ 10 ಕಿ.ಮೀ. ದೂರವಿದ್ದ ರಾಯಬಾಗ ಈಗ ಮೊರಬ ನಿಡಗುಂದಿ ಮೂಲಕ 20 ಕಿ.ಮೀ. ದೂರ ಸಂಚರಿಸಬೇಕಾಗಿದೆ.