ಮೈಸೂರು, ಮೇ 15, ಮೈಸೂರು ಮೈಮುಲ್ ಅಕ್ರಮ ನೇಮಕಾತಿ ವಿಚಾರಕ್ಕೆ ಸಂಬಂಧಿಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಹಾಗೂ ಶಾಸಕ ಸಾ.ರಾ.ಮಹೇಶ್, ಅಕ್ರಮ ನೇಮಕಾತಿಯನ್ನು ಖಂಡಿಸಿ ಮೈಸೂರು ಹಾಲು ಒಕ್ಕೂಟದ ಮುಂದೆ ಮೇ 19ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡೈರಿಯ ಅಧ್ಯಕ್ಷರ ಅಕ್ಕನ ಮಗ ಹಾಗೂ ತಂಗಿಯ ಮಗನಿಗೆ ಸಂದರ್ಶನ ಮಾಡುತ್ತಿದ್ದಾರೆ. ಅವ್ಯವಹಾರ ಮಾಡಿಲ್ಲ ಎನ್ನುವುದಾದರೆ ಇದನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದ ಅವರು, ಲಾಭದಾಯಕ ಹುದ್ದೆಯನ್ನು ತನ್ನ ಕುಟುಂಬಸ್ಥರಿಗೆ ಕೊಡಬಹುದಾ? ಎಂದು ಮೈಮುಲ್ ಅಧ್ಯಕ್ಷರಿಗೆ ಪ್ರಶ್ನೆ ಹಾಕಿದರು.
ಮೈಸೂರು ಹಾಲು ಒಕ್ಕೂಟದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದರೂ ಸಂದರ್ಶನ ನಡೆಸಲು ಸಿದ್ಧತೆ ನಡೆದಿದೆ. ಇದನ್ನು ಖಂಡಿಸಿ ಮಾಜಿ ಸಚಿವ ಎಚ್. ಡಿ. ರೇವಣ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಚಿವ ಸಾ. ರಾ ಮಹೇಶ್ ಹೇಳಿದರು.
ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ಸಂದರ್ಭದಲ್ಲಿ ಯಾವುದೇ ಹುದ್ದೆಗಳ ಸಂದರ್ಶನ ನಡೆಸದಂತೆ ಸರ್ಕಾರವೇ ಆದೇಶ ನೀಡಿದೆ. ಆದರೆ ಇಂತಹ ಸಂದರ್ಭದಲ್ಲೂ ತರಾತುರಿಯಲ್ಲಿ ಸಂದರ್ಶನ ನಡೆಸುವ ಅಗತ್ಯವೇನಿತ್ತು?. ಅವ್ಯವಹಾರ ನಡೆದಿರುವುದು ಇದರಿಂದ ಸಾಬೀತಾದಂತಾಗಿದೆ. ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ಆಗಬೇಕು ಎಂದು ಅವರು ಒತ್ತಾಯಿಸಿದರು.
ಮೈಮುಲ್ ನಲ್ಲಿ ನಡೆದಿರುವ ಅಕ್ರಮ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು. ಮತ್ತೆ ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಅರ್ಹ ಅಭ್ಯರ್ಥಿಗಳಿಗೆ ಹುದ್ದೆಗಳು ಸಿಗುವಂತಾಗಬೇಕು ಎಂದು ಸಾ. ರಾ. ಮಹೇಶ್ ಆಗ್ರಹಿಸಿದರು.ಮೈಮುಲ್ ಗೆ ಮುಖ್ಯಮಂತ್ರಿಗಳು ನಾಮ ನಿರ್ದೇಶನ ಮಾಡಿರುವ ಅವರ ಸಂಬಂಧಿಕರೂ ಸಹ ಹಣ ಪಡೆದಿದ್ದಾರೆಂಬ ಆರೋಪ ಕೇಳಿ ಬಂದಿದೆ. ಹುದ್ದೆಗಳ ನೇಮಕಾತಿ ವಿಚಾರದಲ್ಲಿ ಮುಖ್ಯಮಂತ್ರಿಗಳ ಸಂಬಂಧಿಯೂ ಹಣ ಪಡೆದಿರುವ ಆರೋಪ ಕೇಳಿ ಬಂದಿದೆ. ಹಾಗಾಗಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.