ಚಿಕ್ಕೋಡಿ, ಫೆ.6, ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಚಿಕ್ಕೋಡಿಯ ರೈತ ಮುಖಂಡರು ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ರಚನೆಗೆ ಅನುಕೂಲ ಮಾಡಿಕೊಟ್ಟ ಮಹೇಶ್ ಕುಮಟಳ್ಳಿ ಅವರನ್ನು ಹೊರಗಿಟ್ಟಿರುವುದು ಸರಿಯಲ್ಲ. ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ ಹಿನ್ನೆಲೆಯಲ್ಲಿ ನಾವು ಅವರನ್ನು ಆಯ್ಕೆ ಮಾಡಿ ಕಳಿಸಿದ್ದೆವು, ಆದರೆ ಈಗ ಮುಖ್ಯಮಂತ್ರಿ ಮಾತು ತಪ್ಪಿದ್ದಾರೆ ಎಂದು ರೈತ ಮುಖಂಡ ರಾಜು ಜಂಬಗಿ ಹೇಳಿದ್ದಾರೆ.
ಉಪ ಚುನಾವಣೆಯಲ್ಲಿ ಮಹೇಶ್ ಕುಮಟಳ್ಳಿ ಗೆದ್ದರೆ ಅವರನ್ನು ಸಚಿವರಾಗಿ ಮಾಡುವುದಾಗಿ ಪ್ರಚಾರ ಸಂದರ್ಭದಲ್ಲಿ ಯಡಿಯೂರಪ್ಪ ಹೇಳಿದ್ದರು. ಈಗಲೂ ಕಾಲ ಮಿಂಚಿಲ್ಲ, ಮುಖ್ಯಮಂತ್ರಿ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದು ಅಥಣಿ ಮತಕ್ಷೇತ್ರದ ರೈತ ಮುಖಂಡ ರಾಜು ಒತ್ತಾಯಿಸಿದರು. ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಕಾಂಗ್ರೆಸ್ ನಾಯಕ ಗಜಾನನ ಮಂಗಸೂಳಿ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ನಾವು ಅಥಣಿ ಮತಕ್ಷೇತ್ರದ ಅಭಿವೃದ್ಧಿಯ ಕನಸು ಕಂಡಿದ್ದೆವು. ಆದರೆ ಮಹೇಶ್ ಅವರಿಗೆ ಮೋಸ ಮಾಡಲಾಗಿದೆ. ಮಹೇಶ್ ಅವರು ಕಾಂಗ್ರೆಸ್ ತೊರೆದು ತಪ್ಪು ಮಾಡಿದರು ಎಂದು ಪ್ರತಿಕ್ರಿಯಿಸಿದ್ದಾರೆ. ಮಹೇಶ್ ಅವರು ಕಾಂಗ್ರೆಸ್‌ಗೆ ಮೋಸ ಮಾಡಿ ಹೋಗಿದ್ದರು. ಈಗ ಅವರಿಗೆ ಬಿಜೆಪಿ ಮೋಸ ಮಾಡಿದೆ, ಸದ್ಯ ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎನ್ನುವ ಸ್ಥಿತಿ ಅವರಿಗೆ ಬಂದಿದೆ. ಮಹೇಶ್ ಅವರು ಇನ್ನಾದರೂ ಸಚಿವ ಸ್ಥಾನದ ಆಸೆ ಬಿಟ್ಟು ಕ್ಷೇತ್ರಕ್ಕೆ ಮರಳಬೇಕು. ಪ್ರವಾಹ ಪೀಡಿತ ಜನರ ಕಣ್ಣೀರು ಒರೆಸಲು ಮುಂದಾಗಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.