ಮಹಾರಾಷ್ಟ್ರ : ನವೆಂಬರ್ 9 ರ ನಂತರ ಮುಂದೇನು?

  ನವದೆಹಲಿ, ನ 4:   ಮಹಾರಾಷ್ಟ್ರದಲ್ಲಿ ನವೆಂಬರ್ 9 ರೊಳಗೆ ಹೊಸ ಸರ್ಕಾರ ರಚನೆಯಾಗಬೇಕು. ಹಾಲಿ ವಿಧಾನಸಭೆಯ ಅವಧಿ ಅದೇ ದಿನ ಅಂತ್ಯಗೊಳ್ಳಲಿದೆ. ಒಂದು ವೇಳೆ 9 ನೇ ತಾರೀಖಿನೊಳಗೆ ಹೊಸ ಸರ್ಕಾರ ರಚನೆಯಾಗದಿದ್ದರೆ ಮುಂದೇನು? ಸರ್ಕಾರ ರಚನೆಗೆ ಏಕೈಕ ದೊಡ್ಡ ಪಕ್ಷಕ್ಕೆ ಕೆಲವು ದಿನಗಳ ಮಟ್ಟಿಗೆ ಸರ್ಕಾರ ರಚನೆ ಮಾಡಲು ಅವಕಾಶ ಮಾಡಿಕೊಡುವ ಅಧಿಕಾರ ರಾಜ್ಯಪಾಲರಿಗಿದೆ ಎಂಬ ವಾದವನ್ನೂ ಕೆಲವು ಕಾನೂನು ತಜ್ಞರು ಮುಂದಿಟ್ಟಿದ್ದಾರೆ. ಇದೇ ಅಂಶವನ್ನು ಮುಂದಿಟ್ಟುಕೊಂಡು ಬಿಜೆಪಿ ಹೊಸ ಸರ್ಕಾರ ರಚನೆಯನ್ನು ಮತ್ತಷ್ಟು ವಿಳಂಬ ಮಾಡಲೂಬಹುದು. ಸರ್ಕಾರ ರಚನೆಯ ಸಾಧ್ಯಾಸಾಧ್ಯತೆಗಳನ್ನು ಪೂರ್ಣವಾಗಿ ರಾಜ್ಯಪಾಲರು ಪರಾಮರ್ಶಿ ಮಾಡಿದ ನಂತರವೇ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕೇ ಹೊರತು ಏಕಾಏಕಿ ತರಲು ಸಾಧ್ಯವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಪಿ.ಬಿ.ಸಾವಂತ್ ಹೇಳಿದ್ದಾರೆ.    ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರುವ ಮುನ್ನ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರ್ಯಾಯ ಸರ್ಕಾರ ರಚನೆ ಸಾಧ್ಯತೆಯನ್ನು ಮೊದಲು ಪರಿಶೀಲಿಸಬೇಕು. ಏಕೈಕ ದೊಡ್ಡ ಪಕ್ಷಕ್ಕೆ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕು ಮತ್ತು ಹೊಸ ಸರ್ಕಾರ ವಿಧಾನಸಭೆಯಲ್ಲಿ ತನಗಿರುವ ಬಹುಮತವನ್ನು ಸಾಬೀತುಪಡಿಸಲು ಅವಕಾಶ ಮಾಡಿಕೊಡಬೇಕು. ಏಕಾಏಕಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ರಚನೆಗೆ ಮುಂದಾಗುವ ಅವಶ್ಯಕತೆ ಇಲ್ಲ. ಸರ್ಕಾರ ರಚಿಸಲು ಏಕೈಕ ದೊಡ್ಡ ಪಕ್ಷಕ್ಕೆ ನವೆಂಬರ್ 9 ರ ನಂತರವೂ ಅವಕಾಶ ಮಾಡಿಕೊಡುವ ಅಧಿಕಾರ ರಾಜ್ಯಪಾಲರಿಗಿದೆ ಎಂಬುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.