ಮುಂಬೈ, ಅ. 26: ಮಹಾರಾಷ್ಟ್ರದಲ್ಲಿ 50:50ರ ಸೂತ್ರಕ್ಕೆ ಒಪ್ಪಿದರೆ ಮಾತ್ರ ಸರ್ಕಾರ ರಚನೆಗೆ ಬೆಂಬಲ ನೀಡುವುದಾಗಿ ಶಿವಸೇನೆ ಹೇಳುತ್ತಿರುವುದರಲ್ಲಿ ಯಾವ ತಪ್ಪು ಕಾಣುತ್ತಿಲ್ಲ ಎಂದು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿ ಸೇನಾ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಈ ಹಿಂದೆಯೂ ಶಿವಸೇನೆ-ಬಿಜೆಪಿ ಮೈತ್ರಿ 50:50ರ ಸೂತ್ರದ ಒಪ್ಪಂದದ ಮೇರೆಗೆ ಸರ್ಕಾರ ರಚಿಸಿದೆ. ಹಾಗೆಯೇ ಇದೀಗ ಮತ್ತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಳಿ ಉದ್ದವ್ ಠಾಕ್ರೆ 50:50 ಸೂತ್ರದ ಬೇಡಿಕೆಯ ಆಧಾರದಲ್ಲಿ ಒತ್ತಡ ಹಾಕಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಶಿವಸೇನೆ ಪರ ಶರದ್ ಪವಾರ್ ಗಟ್ಟಿಯಾಗಿ ನಿಂತಿದ್ದಾರೆ. ಇನ್ನು ಕಾಂಗ್ರೆಸ್-ಎನ್ಸಿಪಿ ಮೈತ್ರಿಯೂ 102 ಸೀಟು ಪಡೆದುಕೊಂಡಿದೆ. ಬಿಜೆಪಿ-ಶಿವಸೇನೆ ಮೈತ್ರಿಕೂಟ 220 ಸೀಟು ಗೆಲ್ಲುವ ಗುರಿ ಹೊಂದಿತ್ತು. ಆದರೆ, ಕಾಂಗ್ರೆಸ್ನೊಂದಿಗೆ ಎನ್ಸಿಪಿ ಚುನಾವಣೆ ಗೆಲ್ಲಲು ಭಾರೀ ಶ್ರಮಿಸಿದ್ದೇವೆ. ಇದರಿಂದಲೇ ಬಿಜೆಪಿ-ಶಿವಸೇನೆ ಮೈತ್ರಿಗೆ 220 ಸೀಟು ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು. ಸದ್ಯ ಮಹಾರಾಷ್ಟ್ರದಲ್ಲಿ ಸುಲಭವಾಗಿ ಸರ್ಕಾರ ರಚಿಸಬಹುದು ಎಂಬ ಬಿಜೆಪಿ ನಿರೀಕ್ಷೆ ಸುಳ್ಳಾಗಿದೆ. ಇತ್ತ 50:50 ಸೂತ್ರಕ್ಕೆ ಒಪ್ಪಿಗೆ ಸೂಚಿಸಿದರೆ ಮಾತ್ರ ಸರ್ಕಾರ ರಚನೆ ಮಾಡಲು ಬೆಂಬಲ ನೀಡುವುದಾಗಿ ಶಿವಸೇನೆ ಹೊಸ ದಾಳ ಉರುಳಿಸಿದೆ. ಈ ಸೂತ್ರದ ಪ್ರಕಾರ 5 ವರ್ಷಗಳ ಆಡಳಿತಾವಧಿಯಲ್ಲಿ ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರ್ಕಾರ ಇಬ್ಬರು ಮುಖ್ಯಮಂತ್ರಿಗಳನ್ನು ಮಾಡಬೇಕಾಗುತ್ತದೆ. ಅಂತೆಯೇ ಎರಡೂವರೆ ವರ್ಷ ಶಿವಸೇನೆ ಅಭ್ಯರ್ಥಿ ಸಿಎಂ ಆದರೆ, ಇನ್ನುಳಿದ ಅವಧಿಗೆ ಬಿಜೆಪಿ ಅಭ್ಯರ್ಥಿ ಮುಖ್ಯಮಂತ್ರಿ ಆಗಬಹುದಾಗಿದೆ ಎಂದು ಪವಾರ್ ಹೇಳಿದ್ದಾರೆ.