ಲೋಕದರ್ಶನ ವರದಿ
ಮಹಾಲಿಂಗಪುರ 21: ಬದುಕಿನುದ್ದಕ್ಕೂ ಅನುಗಾಲವೂ ನೆಮ್ಮದಿಯಾಗಿರಲು ಆಧ್ಯಾತ್ಮ ಜ್ಞಾನವೇ ಅಸ್ತ್ರ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಶ್ರೀ ಹೇಳಿದರು.
ಸಮೀಪದ ರನ್ನಬೆಳಗಲಿಯ ಶಿರೋಳ (ಅದೃಶಿ) ತೋಟದ ಆಶ್ರಮದಲ್ಲಿ ಅಡಿವೇಶ್ವರ ಮಹಾರಾಜರ ಪರಮಶಿಷ್ಯ ಮಹಾಲಿಂಗೇಶ್ವರ ಮಹಾರಾಜರ 26ನೇ ಪುಣ್ಯಾರಾಧನೆ ನಿಮಿತ್ತ ದಾನಮ್ಮ ತಾಯಿ ದತ್ತಿನಿಧಿ ಹಾಗೂ ಜ್ಞಾನಯಜ್ಞ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೀವನದ ಜಂಜಾಟಗಳಿಂದ, ಮನಸಿನ ಹೋಯ್ದಾಟಗಳಿಂದ ಮುಕ್ತಿ ಪಡೆದು ಮನಶಾಂತಿಯ ಜೀವನ ಸಾಗಿಸಲು ಭಕ್ತಿಯ ಭಾವ, ಪೂಜೆ, ಧ್ಯಾನದ ಪ್ರಭಾವ ತುಂಬಾ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಶಿರೋಳ(ಅದೃಶಿ) ಪರಿವಾರಕ್ಕೆ ಆಧ್ಯಾತ್ಮವೇ ಜೀವನದ ಒಂದು ಭಾಗವಾಗಿದ್ದು ಶ್ಲಾಘನೀಯ ಎಂದರು.
ಮೊದಲ ದಿನ 10.30ಕ್ಕೆ ಕಕಮರಿಯ ರಾಯಲಿಂಗೇಶ್ವರ ಸಂಸ್ಥಾನಮಠದ ಅಭಿನವ ಗುರುಲಿಂಗಜಂಗಮ ಮಹಾರಾಜರಿಂದ ವೀಣಾಪೂಜೆ ಹಾಗೂ ದಾಸಬೋಧ ವಾಚನದೊಂದಿಗೆ ಸಪ್ತಾಹ ಆರಂಭವಾಯಿತು. ಸಂಜೆ ದಾನಮ್ಮತಾಯಿ ಶಿರೋಳ ದತ್ತಿನಿಧಿ ಕಾರ್ಯಕ್ರಮ, ಕಸಾಪ ಅಧ್ಯಕ್ಷ ಬಸವರಾಜ ಮೇಟಿ ತಂಡದಿಂದ ಜಾನಪದ ಸಂಭ್ರಮ, ಮಲ್ಲಪ್ಪ ಮಹಾರಾಜರಿಂದ ಪ್ರವಚನ ನಡೆಯಿತು.
ಮರುದಿನ ಬೆಳಗ್ಗೆ ಸಂಪ್ರದಾಯದಂತೆ ಕಾಕಡಾರತಿ, ಶೇಜಾರತಿ ನಂತರ ಮಹಾಲಿಂಗೇಶ್ವರ ಜ್ಞಾನಯೋಗಾಶ್ರಮದಿಂದ ಮಾರುತಿ ದೇವಸ್ಥಾನದವರೆಗೆ ಸಕಲ ಮಂಗಲವಾದ್ಯಗಳೊಂದಿಗೆ ಪಲ್ಲಕ್ಕಿ ಉತ್ಸವ ನಡೆಯಿತು, ಪುಷ್ಪವೃಷ್ಠಿ, ಮಹಾಪ್ರಸಾದ ಜರುಗಿತು. ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀ ಸಾನಿಧ್ಯ ವಹಿಸಿದ್ದರು. ಹಿಪ್ಪರಗಿಯ ಪ್ರಭು ಮಹಾರಾಜರು, ಸಿದ್ರಾಮ ಶಿವಯೋಗಿ, ಕಂಕಣವಾಡಿ ಮಾರುತಿ ಶರಣರು, ಶರಣೆ ಕಾಶಿಬಾಯಿ ಪುರಾಣಿಕ, ಧರೆಪ್ಪಣ್ಣ ಸಾಂಗ್ಲಿಕರ, ಸಿದ್ದು ಕೊಣ್ಣೂರ, ಸಿದ್ದುಗೌಡ ಪಾಟೀಲ, ಶಿವನಗೌಡ ಪಾಟೀಲ, ಅಶೋಕ ಸಿದ್ದಾಪೂರ, ಸೇರಿದಂತೆ ನಾನಾ ಪೂಜ್ಯರು, ಗಣ್ಯರು ಭಾಗವಹಿಸಿದ್ದರು. ಷಣ್ಮುಖ ಶಿರೋಳ ಸ್ವಾಗತಿಸಿದರು. ಗಜಾನನ ಶಿರೋಳ ಮಾಲಾರ್ಪಣೆ ಮಾಡಿದರು. ಹಣಮಂತ ಶಿರೋಳ ನಿರೂಪಿಸಿದರು. ಶಿವಪ್ಪ ಶಿರೋಳ ವಂದಿಸಿದರು.