ಲೋಕದರ್ಶನ ವರದಿ
ಮಹಾಲಿಂಗಪುರ ನಗರದ ಬಳಕೆಗೆ ಬಾರದಂತಾದ ಸಿ.ಸಿ ಟಿವಿ ಕ್ಯಾಮರಾಗಳು : ಹನಮಂತ ನಾವಿ
ಮಹಾಲಿಂಗಪುರ: ಪಟ್ಟಣದ ಸೌಂದರ್ಯಕರಣಕ್ಕಾಗಿ ಸ್ವಚ್ಛತೆ ಮತ್ತು ಸುರಕ್ಷತೆಯನ್ನು ನಿಗ್ರಹಿಸಲು ಕ್ಯಾಮರಾಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಕಾರಣಕ್ಕಾಗಿ ಪಟ್ಟಣಕ್ಕೆ ನೆರೆಯ ತಾಲೂಕು ಮತ್ತು ಜಿಲ್ಲೆಗಳಿಂದ ನಿತ್ಯ ಸಾವಿರಾರು ಜನ ಬಂದು ಹೋಗುತ್ತಾರೆ. ಪಟ್ಟಣವು ಸುತ್ತಮುತ್ತಲು ಹಲವಾರು ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದು ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳ ಹಾವಳಿ ಹೇಳತೀರದು.
ಅಪರಾಧ, ಕಳ್ಳತನ, ದರೋಡೆ, ಶೋಷಣೆಯಂತಹ ಹತ್ತಾರು ಪ್ರಕರಣಗಳು ದಿನೇ ದಿನೇ ಹಚ್ಚುತ್ತಿವೆ. ಸುರಕ್ಷಿತ ದೃಷ್ಟಿಯಿಂದ ಮುಂಜಾಗ್ರತ ಕ್ರಮವಾಗಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿ.ಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಯಾವೊಂದು ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವು ವೃತ್ತಗಳಲ್ಲಿ ಅಳವಡಿಸಲಾದ ಕ್ಯಾಮರಾಗಳು ಕಣ್ಮರೆಯಾಗಿವೆ.ಇನ್ನೂ ಕೆಲವು ಕಡೆ ಬಳಕೆಗೆ ಬಾರದಂತಾಗಿವೆ.
ಈ ಹಿಂದೆ 2015-16ರಲ್ಲಿ ಮಾಜಿ ಸಚಿವರಾದ ಉಮಾಶ್ರೀ ಅವರು ತೇರದಾಳ ಮತಕ್ಷೇತ್ರದ ಶಾಸಕರಾಗಿದ್ದ ವೇಳೆ ಮುಂದಾಳತ್ವ ವಹಿಸಿ ಪ್ರಮುಖ 6 ಸರ್ಕಲ್ ನಲ್ಲಿ ಸಿ.ಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದರು ಅದರ ಪೈಕಿ ಬಸವೇಶ್ವರ ವೃತ್ತ, ಮಾರ್ಕೆಟ್, ನಡುಚೌಕಿ, ಗಾಂಧಿವೃತ್ತ, ಚೆನ್ನಮ್ಮ ವೃತ್ತ, ಬುದ್ನಿ ಪಿ.ಡಿ ಗಳಲ್ಲಿ ಇದ್ದ ಕ್ಯಾಮೆರಾಗಳು ಬಹುತೇಕ ಮಾಯವಾಗಿವೆ. ಪಟ್ಟಣವು ದಿನೇ ದಿನೇ ಬೆಳೆಯುತ್ತಿರುವ ವಾಣಿಜ್ಯ ನಗರಿ. 23 ವಾರ್ಡಗಳನ್ನು ಹೊಂದಿದ ಮಹಾಲಿಂಗಪುರ ಪಟ್ಟಣದಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಮಹಾರಾಷ್ಟ್ರ ಸೇರಿದಂತೆ ಪ್ರಮುಖ ನಗರಗಳಿಗೆ ಹಾದು ಹೋಗಲು ಪಟ್ಟಣವು ಪ್ರಮುಖ ಕೇಂದ್ರವಾಗಿದೆ. ಈ ಹಿಂದೆ ಬೆಲ್ಲಕ್ಕೆ ಹೆಸರಾದ ಪಟ್ಟಣವಿದು. ಲೋಡ್ ತುಂಬಿಕೊಂಡ ಟ್ರಕ್ ಟ್ರಾಕ್ಟರ್ ಹೀಗೆ ಹತ್ತಾರು ಭಾರಿ ವಾಹನಗಳು ಬೇರೆ ಕಡೆ ಸಂಚರಿಸಬೇಕಾದರೆ ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗಬೇಕು. ಈ ಹಿಂದೆ ಹಲವಾರು ಅಪಘಾತದಂತಹ ಘಟನೆಗಳು ಪಟ್ಟಣದೊಳಗೆ ಸಂಭವಿಸಿವೆ. ಹಾಗೆ ಇತ್ತೀಚೆಗೆ ನಡೆದ ಅಂಗಡಿಯೊಂದರ ಕಳ್ಳತನ, ದುಷ್ಕರ್ಮಿಗಳ ಭಯಾನಕ ಓಡಾಟ, ಕೆಲವು ವರ್ಷಗಳ ಹಿಂದೆ ನಡೆದ ಬಸವೇಶ್ವರ ಮೂರ್ತಿ ಭಿನ್ನ ಸೇರಿದಂತೆ ಹಲವು ಘಟನೆಗಳು ಸಂಭವಿಸಿವೆ. ಖದೀಮರು ಕೆಲವು ಅಂಗಡಿಗಳನ್ನು ದೋಚಿರುವ ಉದಾಹರಣೆಯೂ ಕೂಡ ಇದೆ. ಹೀಗಿದ್ದರೂ ಗೃಹ ಇಲಾಖೆ ಮೈ ಮರೆತಿರುವುದು ದುರ್ದೈವದ ಸಂಗತಿ. ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ನೆಪಮಾತ್ರಕ್ಕೆ ಸಿ.ಸಿ ಟಿವಿ ಅಳವಡಿಕೆ ಕಾರ್ಯವನ್ನು ಬಿಟ್ಟು ಕಾರ್ಯಗತಗೊಳಿಸಬೇಕಾಗಿದೆ. ಸುರಕ್ಷಿತ ದೃಷ್ಟಿಯಿಂದ ತ್ವರಿತ ಗತಿಯಲ್ಲಿ ಸಂಬಂಧ ಪಟ್ಟ ಇಲಾಖೆ ಮುತುವರ್ಜಿ ವಹಿಸಿ ಗುಣಮಟ್ಟದ ಸಿ ಸಿ ಕ್ಯಾಮೆರಾಗಳನ್ನು ಪ್ರಮುಖ ವೃತ್ತಗಳಲ್ಲಿ ಅಳವಡಿಸಬೇಕಾಗಿದೆ. ಇಲ್ಲವಾದರೆ ಕಳ್ಳ, ಖದೀಮರಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ.
ಬಾಕ್ಸ್.
1. ಇದು ಸಂಪೂರ್ಣ ಪೊಲೀಸ್ ಇಲಾಖೆಗೆ ಮೇಲ್ವಿಚಾರಣೆಯ ಜವಾಬ್ದಾರಿಯಾಗಿದ್ದು, ಅವರಿಂದ ಸಿ.ಸಿ ಕ್ಯಾಮೆರಾಗಳ ಅಳವಡಿಕೆ ಕುರಿತು ಪ್ರಸ್ತಾವನೆ ಬಂದಲ್ಲಿ, ಮುಂಬರುವ ಕ್ರಿಯಾ ಯೋಜನೆಯ ಅನುದಾನ ಬಿಡುಗಡೆಯಾದಾಗ ಕ್ರಮ ಕೈಗೊಳ್ಳಲಾಗುವುದು.
ಈರಣ್ಣ ದಡ್ಡಿ, ಪುರಸಭೆ ಮುಖ್ಖ್ಯಾಧಿಕಾರಿಗಳು, ಮಹಾಲಿಂಗಪುರ.
2. ಈಗಾಗಲೇ ಕ್ಯಾಮೆರಾಗಳ ಅಳವಡಿಕೆಗಾಗಿ ಪುರಸಭೆಗೆ ಮನವಿ ನೀಡಲಾಗಿದೆ. ಯಾವುದೇ ಸ್ಪಂದನೆ ಸಿಕ್ಕಿಲ್ಲ. ಆದಷ್ಟು ಬೇಗ ಕ್ಯಾಮರಾಗಳ ಅಳವಡಿಕೆಗೆ ಮುಂದಾದರೆ ನಮಗೂ ಕೂಡ ಸಹಕಾರಿಯಾಗುತ್ತದೆ.
ಕಿರಣ್ ಸತ್ತಿಗೇರಿ. ಠಾಣಾಧಿಕಾರಿಗಳು, ಮಹಾಲಿಂಗಪುರ.
3.ಈ ಹಿಂದೆ ಕ್ಯಾಮೆರಾಗಳ ದುರಸ್ತಿ ಹಾಗೂ ಹೊಸ ಕ್ಯಾಮೆರಾಗಳ ಅಳವಡಿಕೆಗಾಗಿ ಮನವಿ ನೀಡಿದ್ದೆ. ಹಿಂದೆ ಜೋಡಿಸಲಾದ ಆರು ಪ್ರಮುಖ ವೃತ್ತಗಳ ಜೊತೆಗೆ ನಾಲ್ಕು ದ್ವಾರಬಾಗಿಲಿಗೆ ಸಿ ಸಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಸಂಬಂಧ ಪಟ್ಟ ಇಲಾಖೆ ಗಮನಕ್ಕೆ ತಂದು ಮನವಿ ನೀಡಲಾಗಿದೆ. ಇನ್ನುವರೆಗೂ ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ.
ಚನಬಸು ಹುರಕಡ್ಲಿ. ಸಮಾಜ ಸೇವಕ, ಮಹಾಲಿಂಗಪುರ