ಲೋಕದರ್ಶನ ವರದಿ
ಹುನಗುಂದ19: ಖ್ಯಾತ ಪಂಚಭಾಷಾ ಗಾಯಕಿ ಮಧುಶ್ರೀ ಭಟ್ಟಾಚಾರ್ಯ ಅವರು ತಮ್ಮ ಸಂಗೀತ ಕ್ಷೇತ್ರದಲ್ಲಿಯೇ ಮೊದಲ ಭಾರಿಗೆ ಪಿ.ಬಿ.ಧುತ್ತರಗಿ ಅವರು ರಚನೆ ಮಾಡಿದ ಹಾಡು ಹಾಡುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.
ಹೌದು, ಸುಕ್ಷೇತ್ರ ಸಿದ್ದನಕೊಳ್ಳದಲ್ಲಿ ಸಿದ್ದಪ್ಪಜ್ಜನವರ ಜಾತ್ರಾ ಮಹೋತ್ಸವದ ನಿಮಿತ್ಯ ನಡೆದ ಸಿದ್ದಶ್ರೀ ರಾಷ್ಟ್ರೀಯ ಉತ್ಸವದ 2ನೇ ದಿನದಂದು ಚಲನಚಿತ್ರೋತ್ಸವ ಮತ್ತು ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಅವರು, ಪ್ರಸಿದ್ಧ ನಾಟಕಕಾರ ಹಾಗೂ ಕವಿ ಪಿ.ಬಿ.ಧುತ್ತರಗಿ ಅವರು ರಚನೆ ಮಾಡಿದ ಸಿದ್ದನಕೊಳ್ಳದ ಮಹಿಮೆಯನ್ನು ಸಾರುವ ಕನ್ನಡ ಹಾಡನ್ನು ಹಾಡುವ ಮೂಲಕ ಸಿದ್ದನಕೊಳ್ಳದ ಭಕ್ತರಿಗೆ ಮತ್ತು ಸಂಗೀತ ಕಲಾವಿದರಿಗೆ ಸಂತಸ ನೀಡಿ ಕನ್ನಡಿಗರ ಮನ ಗೆದ್ದಿದ್ದಾರೆ. ನಂತರ ಗಾಯಕಿ ಮಧುಶ್ರೀ ಅವರು ಹಾಡಿದ ಹಿಂದಿ ಚಲನಚಿತ್ರ ಹಾಡುಗಳು ಕೂಡಾ ಉತ್ಸವದಲ್ಲಿ ಭಾರಿಗೆ ಮೆಚ್ಚುಗೆ ವ್ಯಕ್ತವಾಯಿತು. ಕೆಲವು ಚಲನಚಿತ್ರ ಹಾಡುಗಳಿಗೆ ಅವರ ಪತಿ ರಾಬಿ ಬಾದಲ್ ಸಾತ್ ನೀಡಿದರು ಇದು ಕಾರ್ಯಕ್ರಮದಲ್ಲಿ ವಿಶೇಷವಾಗಿತ್ತು.
ಶ್ರೀಗಳ ಹಾಡು: ಸಿದ್ದನಕೊಳ್ಳದ ಧರ್ಮಾಧಿಕಾರಿ ಡಾ.ಶಿವಕುಮಾರ ಶ್ರೀಗಳು ಕೂಡಾ ಭಕ್ತಾಧಿಗಳ ಒತ್ತಾಯದ ಮೇರೆಗೆ ಶಿಶುನಾಳ ಶರೀಫ ಅವರ ಮಹಿಮೆ ಸಾರುವ ಹಾಡನ್ನು ಹಾಡುವ ಮೂಲಕ ಭಕ್ತರ ಗಮನ ಸೆಳೆದರು.ಉತ್ಸವದಲ್ಲಿ ಭಾಗಿಯಾಗಿದ್ದ ಜನ ಶ್ರೀಗಳ ಹಾಡಿನ ಧ್ವನಿಗೆ ಧ್ವನಿಗೂಡಿಸಿದರು.ಇಡೀ ಉತ್ಸವದಲ್ಲಿ ಹಬ್ಬದ ವಾತವರಣ ನಿರ್ಮಾಣ ವಾಗಿತ್ತು.ಶ್ರೀಗಳ ಕಲೆಗೆ ಶ್ಲಾಘನೀಯ ಮಾತುಗಳು ಕೇಳಿ ಬಂದವು.
ನಂತರ ನಡೆದ ಕಾರ್ಯಕ್ರಮದಲ್ಲಿ ಯುವ ನಟ ಪ್ರವೀಣ ಪತ್ರಿ, ಜಗದೀಶ ಕಾಟವಾ, ಸಾಕ್ಷಿ ಹಿರೇಮಠ ಅವರು ಕೂಡಾ ವಿವಿಧ ಹಾಡು ಹಾಡುವ ಮೂಲಕ ಸೇರಿದ ಜನರ ಮನ ರಂಜಿಸಿದರು.