ಸಾರ್ಥಕತೆ ಮೆರೆದ ಬಾಲಿವುಡ್ ಗಾಯಕಿ ಮಧುಶ್ರೀ

ಲೋಕದರ್ಶನ ವರದಿ

ಬಾಗಲಕೋಟೆ16: ಸಿದ್ದನಕೊಳ್ಳದ ಜಾತ್ರಾ ಮಹೋತ್ಸವದ ಅಂಗವಾಗಿ ಕೊಡಮಾಡುವ ಸಿದ್ದಶ್ರೀ ಪ್ರಶಸ್ತಿಗೆ ಭಾಜನರಾದ ಬಾಲಿವುಡ್ ಖ್ಯಾತ ಗಾಯಕಿ ಮಧುಶ್ರೀ ಬಟ್ಟಾಚಾರ್ಯ ಅವರು ಪ್ರಶಸ್ತಿಯ ಮೊತ್ತವನ್ನು ಗದಗ ಜಿಲ್ಲೆಯ ರೋಣ ತಾಲೂಕಿನ ಅಸುಂಡಿ ಗ್ರಾಮದ ವಿರೇಶ ಕುರಹಟ್ಟಿ ಯೋಧನ ಕುಟುಂಬಕ್ಕೆ ನೀಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.

  ಹುನಗುಂದ ತಾಲೂಕಿನ ಸುಕ್ಷೇತ್ರ ಸಿದ್ದನಕೊಳ್ಳದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಸಿದ್ದಶ್ರೀ ಪ್ರಶಸ್ತಿ ಪ್ರಧಾನ ಹಾಗೂ ಚಲನಚಿತ್ರೋತ್ಸವ ಸಮಾರಂಭವು ಅದ್ದೂರಿಯಾಗಿ ಜರುಗಿತು. ಡಾ.ಶಿವಕುಮಾರ ಸ್ವಾಮಿಗಳ ನೇತೃತ್ವದಲ್ಲಿ ನಡೆಯುವ ಸಿದ್ದಶ್ರೀ ಪ್ರಶಸ್ತಿಯನ್ನು ಮಧುಶ್ರೀ ಅವರಿಗೆ ನೀಡಿ ಗೌರವಿಸಲಾಯಿತು.

      ಬಾಹುಬಲಿ ಹಾಗೂ ಶಿವಾಜಿ ಚಲನಚಿತ್ರದ ಹಿನ್ನಲೆಯ ಗಾಯಕಿಯಾಗಿದ್ದ ಮಧುಶ್ರೀ ಅವರಿಗೆ ಸಿದ್ದನಕೊಳ್ಳದ ಮಠದಿಂದ ಪ್ರತಿ ವರ್ಷ ಕೊಡಮಾಡುವ ಸಿದ್ದಶ್ರೀ ಪ್ರಶಸ್ತಿ ಫಲಕ ಹಾಗೂ 25 ಸಾವಿರ ನಗದು ಹಣವನ್ನು ನೀಡಿ ಸನ್ಮಾನಿಸಲಾಯಿತು.

ಪ್ರಶಸ್ತಿಯನ್ನು ಸ್ವೀಕರಿಸಿದ ಮಧುಶ್ರೀ ಅವರು ಮಾತನಾಡಿ ದೇಶ ಕಾಯುವ ಯೋಧರು ನಿಜವಾದ ಹೀರೋ. ಅವರು ಕಷ್ಟಪಟ್ಟು ಕೆಲಸ ಮಾಡಿರುವದಕ್ಕೆ ನಾವು ನೆಮ್ಮದಿಯಿಂದ ಜೀವನ ಸಾಗಿಸುವಂತಾಗಿದೆ. ಆದ್ದರಿಂದ ಪ್ರಶಸ್ತಿಯ ಜೊತೆಗೆ ಬಂದಿರುವ ನಗದು ಹಣವನ್ನು ವೀರಣ ಮರಣ ಹೊಂದಿರುವ ಯೋಧರ ಕುಟುಂಬಕ್ಕೆ ನೀಡುವುದಾಗಿ ತಿಳಿಸಿದರು. 

       ಇತ್ತೀಚೆಗೆ ವೀರಣ ಮರಣ ಹೊಂದಿರುವ ಗದಗ ಜಿಲ್ಲೆಯ ರೋಣ ತಾಲೂಕಿನ ಅಸುಂಡಿ ಗ್ರಾಮದ ವೀರ ಯೋಧರ ಕುಟುಂಬದವರನ್ನು ಕರೆಸಿ ಸನ್ಮಾನ ಮಾಡಿ 25 ಸಾವಿರ ನಗದು ಹಣವನ್ನು ನೀಡುವ ಮೂಲಕ ಸಾರ್ಥಕತೆ ಮೆರೆದರು