ಬೆಂಗಳೂರು, ಮೇ 12, ಚಾಲಕರು ಸಂಕಷ್ಟದಲ್ಲಿರುವ ಬೆನ್ನಲ್ಲೇ ಕೊರಟಗೆರೆ ತಾಲ್ಲೂಕಿನಲ್ಲಿ ಚಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕೂಡಲೇ ಈತನ ಕುಟುಂಬಕ್ಕೆ ಸರ್ಕಾರ 10 ಲಕ್ಷ ರೂ. ಹಣವನ್ನು ಪರಿಹಾರವಾಗಿ ಒದಗಿಸಬೇಕೆಂದು ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ ಆಗ್ರಹಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಲಕರ ಸಂಕಷ್ಟಕ್ಕೆ ಸ್ಪಂದಿಸುವಂತೆ ರಾಜ್ಯ ಸರ್ಕಾರದ ಬಳಿ ಮನವಿ ಮಾಡಿದ್ದೆವು. ಅದಕ್ಕೆ ಸ್ಪಂಧಿಸುವಂತೆ ಖಾಲಿ ಪಾತ್ರೆ ಖಾಲಿ ತಟ್ಟೆ ಚಳುವಳಿ ಅಭಿಯಾನ ಮಾಡಿ ಸರ್ಕಾರದ ಗಮನ ಸೆಳೆದಿದ್ದರು. ಇವುಗಳನ್ನು ಗಮನಿಸಿದ ಮುಖ್ಯಮಂತ್ರಿ ಅವರು ಚಾಲಕರಿಗೆ 5 ಸಾವಿರ ರೂ. ಪರಿಹಾರ ನೀಡುವುದಾಗಿಯೂ ಘೋಷಿಸಿದ್ದರು.
ಸೇವಾಸಿಂಧು ಆಪ್ ಮೂಲಕ 5 ಸಾವಿರ ರೂ. ಹಣವನ್ನು ಪರಿಹಾರವಾಗಿ ನೀಡುವುದಾಗಿ ಹೇಳಿತ್ತಾದರೂ ಇನ್ನೂ ಸೇವಾ ಸಿಂಧು ಆಪ್ ಮತ್ತು ವೆಬ್‍ಸೈಟ್‍ನಲ್ಲಿ ಹಣ ಪಡೆಯುವ ಯಾವ ಲಿಂಕ್‍ಗಳನ್ನೂ ನೀಡಿಲ್ಲ. ಆದ್ದರಿಂದ ಸಾವಿರಾರು ಚಾಲಕರು ಒಕ್ಕೂಟಗಳಿಗೆ ಕರೆ ಮಾಡಿ ತಮ್ಮ ಸಂಕಷ್ಟಗಳನ್ನು ಹೇಳುತ್ತಿದ್ದಾರೆ. ಹಾಗಾಗಿ ಸರ್ಕಾರ ಸಾರಿಗೆ ಅಧಿಕಾರಿಗಳಿಗೆ ಕೂಡಲೇ ಹಣ ನೀಡುವ ಕಾರ್ಯದ ಬಗ್ಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.ಈಗಾಗಲೇ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿ ಅರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಚಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಂದಾಗುವ ಅನಾಹುತವನ್ನು ತಪ್ಪಿಸುವ ಸಲುವಾಗಿ ಈ ಕೂಡಲೇ ಚಾಲಕರಿಗೆ ಹಣ ನೀಡಬೇಕು ಹಾಗೂ ಮೃತ ಚಾಲಕನ ಕುಟುಂಬಕ್ಕೆ 10 ಲಕ್ಷ ರೂ. ಹಣವನ್ನು ಪರಿಹಾರವಾಗಿ ನೀಡಬೇಕು ಎಂದು ಗಂಡಸಿ ಸದಾನಂದಸ್ವಾಮಿ ಹಾಗೂ ಕರ್ನಾಟಕ ಚಾಲಕರ ಒಕ್ಕೂಟದ ಅಧ್ಯಕ್ಷ ನಾರಾಯಣಸ್ವಾಮಿ, ನಮ್ಮ ಚಾಲಕರ ಒಕ್ಕೂಟದ ಅಧ್ಯಕ್ಷ ಸೋಮಶೇಖರ್ ಒತ್ತಾಯಿಸಿದ್ದಾರೆ.