ಬೆಳಗಾವಿ 23: ಸತ್ತ ಪ್ರಾಣಿಯನ್ನು ತಿನ್ನಲು ರಣಹದ್ದುಗಳು ಕಚ್ಚಾಡಿದಂತೆ ಕಾಂಗ್ರೆಸ್ಸಿಗರು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ ಎಂದು ಬೆಳಗಾವಿಯಲ್ಲಿ ಸಂಸದ ಗೋವಿಂದ ಕಾರಜೋಳ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಸಿಎಂ ಸಿದ್ಧರಾಮಯ್ಯನವರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕಾಂಗ್ರೆಸ್ ಗೆ ನಿಜವಾಗಿಯೂ ದಲಿತರ ಬಗ್ಗೆ ಕಾಳಜಿ ಇದ್ದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದಲಿತ ಮುಖ್ಯಮಂತ್ರಿಗೆ ಅವಕಾಶ ನೀಡಲಿ ಎಂದರು.
ಸಿದ್ಧರಾಮಯ್ಯನವರು ತಮ್ಮ ಭಂಡತನವನ್ನು ಬಿಟ್ಟು ತಮ್ಮ ಚುನಾವಣಾ ಪ್ರಣಾಳಿಕೆಯನ್ನು ಒಮ್ಮೆ ಸರಿಯಾಗಿ ನೋಡಬೇಕು. ಐದು ಗ್ಯಾರಂಟಿ ಯೋಜನೆಗಳನ್ನು ಕೂಡ ಸರಿಯಾಗಿ ನೀಡುತ್ತಿಲ್ಲ. ಪೊಳ್ಳು ಭರವಸೆಗಳನ್ನು ನೀಡಿ ಜನರಿಗೆ ಮೋಸ ಮಾಡುತ್ತಿದ್ದಾರೆ. 2024-2025 ರಲ್ಲಿ 3 ಲಕ್ಷ 70 ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದರು. ಆದರ ಇದರಲ್ಲಿ ಸಂಗ್ರಹವಾಗಿದ್ದು ಕೇವಲ 1 ಲಕ್ಷ 72 ಸಾವಿರ ಕೋಟಿ ಮಾತ್ರ. 64 ಸಾವಿರ ಕೋಟಿ ರೂಪಾಯಿ ಗುತ್ತಿಗೆದಾರರ ಬಿಲ್ ನೀಡಿಲ್ಲ. ಹಲವರು ಆತ್ಮಹತ್ಯೆ ಮಾಡಿಕೊಂಡರೆ 27 ಗುತ್ತಿಗೆದಾರರು ರಾಜ್ಯಪಾಲರಿಗೆ ದಯಾಮರಣ ಪತ್ರ ಬರೆದಿದ್ದಾರೆ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಭ್ರಷ್ಟಾಚಾರಕ್ಕೆ ಸೋತು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನವರು ಅಭಿವೃದ್ಧಿ ಮರೆತು ಅಧಿಕಾರಕ್ಕಾಗಿ ಸತ್ತ ಪ್ರಾಣಿಗಳನ್ನು ತಿನ್ನಲು ರಣಹದ್ದುಗಳು ಕಚ್ಚಾಡುವಂತೆ ಕಚ್ಚಾಡುತ್ತಿದ್ದಾರೆ. ಕೀಳುಮಟ್ಟದ ಟೀಕೆಯೊಂದಿಗೆ ನಾಲ್ಕು ಗುಂಪುಗಳಾಗಿ ಬಡಿದಾಡುತ್ತಿದ್ದಾರೆ ಎಂದು ಕಾರಜೋಳ ಹೇಳಿದರು.