ನವದೆಹಲಿ, ಮಾ 7, ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ವೈರಾಣು ಸೋಂಕು ಜಗತ್ತಿನಾದ್ಯಂತ ವ್ಯಾಪಿಸಿದ್ದು ಈ ಸೋಂಕಿಗೆ ಹಲವರು ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಬ್ರುಸೆಲ್ಸ್ ಪ್ರವಾಸ ರದ್ದು ಮಾಡಿದ್ದಾರೆ. ಅಲ್ಲದೇ ಭಾರತ- ಐರೋಪ್ಯ ಒಕ್ಕೂಟ ಶೃಂಗ ಸಭೆಯನ್ನೂ ಮುಂದೂಡಲಾಗುವುದು ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಗುರುಗ್ರಾಮದಲ್ಲಿ ಓರ್ವ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಅವರೊಂದಿಗೆ ಸಂಪರ್ಕದಲ್ಲಿದ್ದ ಐವರನ್ನು ದೆಹಲಿಯಲ್ಲಿ ತೀವ್ರ ನಿಗಾದಲ್ಲಿ ಇಡಲಾಗಿದೆ. ಸೋಂಕಿತ ವ್ಯಕ್ತಿ ಒಟ್ಟು 91 ಮಂದಿಯೊಂದಿಗೆ ಸಂಪರ್ಕದಲ್ಲಿದ್ದ ಎಂಬ ಮಾಹಿತಿಯೂ ಹೊರಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಟಲಿ ಮತ್ತು ದಕ್ಷಿಣ ಕೊರಿಯಾದಿಂದ ಬರುವ ಎಲ್ಲ ಪ್ರಯಾಣಿಕರಿಗೂ ಕೇಂದ್ರ ಸರಕಾರ ಹೆಚ್ಚುವರಿ ವೀಸಾ ನಿರ್ಬಂಧ ವಿಧಿಸಿದೆ. ಆಯಾ ದೇಶಗಳ ಆರೋಗ್ಯ ಪ್ರಾಧಿಕಾರದಡಿ ಬರುವ ಪ್ರಯೋಗಾಲಯಗಳಿಂದ ತಮಗೆ ಕೋವಿಡ್-19 ಸೋಂಕು ಇಲ್ಲ ಎಂದು ದೃಢಪಡಿಸಿದ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತೋರಿಸಿ ಭಾರತ ಪ್ರವೇಶಕ್ಕೆ ಅನುಮತಿ ಪಡೆಯಬಹುದಾಗಿ ಎಂದು ಮೂಲಗಳು ತಿಳಿಸಿವೆ.