ಮರಳಿನ ಸಮಸ್ಯೆ ಕುರಿತು ಸದನದಲ್ಲಿ ಶಾಸಕರು ಧ್ವನಿ ಎತ್ತಲಿ: ಭಾಸ್ಕರ ಪಟಗಾರ

MLAs should raise their voice in the House on the issue of sand: Bhaskar Patagara

ಕಾರವಾರ 10: ಜಿಲ್ಲೆಯ ಮರಳಿನ ಸಮಸ್ಯೆಯ ಕುರಿತು ಎಲ್ಲ ಶಾಸಕರು ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಭಾಸ್ಕರ ಪಟಗಾರ ಒತ್ತಾಯಿಸಿದ್ದಾರೆ.  

ಕಾರವಾರದ ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿಂದ ಬಡವರಿಗೆ ಮರಳು ಸಿಗುತ್ತಿಲ್ಲ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಬೇಕು. ಬೆಳಗಾವಿಯ ಅಧಿವೇಶನದಲ್ಲಿ ಈ ಕುರಿತು ಸರಕಾರದ ಗಮನಸೆಳೆದು ಜಿಲ್ಲೆಯ ಬಡವರಿಗೆ ನ್ಯಾಯ ಒದಗಿಸಬೇಕು ಎಂದರು. ಮರಳು ತೆಗೆಯುವ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಇದೆ. ಹೀಗಾಗಿ ಯಾರಿಗೂ ಪಾಸ್ ನೀಡುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ನಮಗೂ ಕಾನೂನಿನ ಬಗ್ಗೆ ಗೌರವ ಇದೆ. ಆದರೆ ಲೀಸ್ ಗಾಗಿ ಅರ್ಜಿ ಹಾಕಿದ್ದು, ಲೀಸ್ ಸಿಗದ ಕಾರಣ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ತಮ್ಮ ಹಿತಾಸಕ್ತಿಗೆ ದಾವೆ ಹೂಡುವವರು ಕರಾವಳಿಯಲ್ಲಿರುವ ಇತರೆ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸಿ. ಅನಧಿಕೃತವಾಗಿ ಟೋಲ್ ಸಂಗ್ರಹ ಆಗುತ್ತಿದೆ. ಇಂತಹ ವಿಚಾರಗಳಿಗೆ ನ್ಯಾಯಾಲಯಕ್ಕೆ ಹೋಗದೇ ಸಾರ್ವಜನಿಕರಿಗೆ ತೊಂದರೆ ಮಾಡುವುದು ಸರಿ ಅಲ್ಲ ಎಂದರು.ಸದ್ಯ ಅಕ್ರಮವಾಗಿ ಸಾರ್ವಜನಿಕರು ನಾಲ್ಕು ಪಟ್ಟು ಹಣ ನೀಡಿ ಮರಳು ಖರೀದಿ ಮಾಡುತಿದ್ದಾರೆ. ಹೀಗಾಗಿ ಜಿಲ್ಲೆಯ ಶಾಸಕರು ಹಾಗೂ ಸಚಿವರು ಮರಳಿನ ಸಮಸ್ಯೆ ಬಗ್ಗೆ ಧ್ವನಿ ಎತ್ತಿ ನ್ಯಾಯ ಒದಗಿಸಬೇಕು ಎಂದರು.ರಂಜನ್ ದೇವಾಡಿಗ, ಸಂತೋಷ ಮುರುಡೇಶ್ವರ ಇದ್ದರು.