ಸಂತ್ರಸ್ತರಿಗೆ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಶಾಸಕ ಯಾದವಾಡ ಭೇಟಿ

ಲೋಕದರ್ಶನ ವರದಿ

ರಾಮದುರ್ಗ: ರಾಮದುರ್ಗ ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಉಂಟಾದ ಮಲಪ್ರಭಾ ನದಿ ಪ್ರವಾಹ ಹಾಗೂ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಸಂತ್ರಸ್ಥರಿಗೆ ತೆರೆಯಲಾದ ರಾಮದುರ್ಗ ಪಟ್ಟಣದ ವಿವಿಧ ವಾರ್ಡಗಳು ಸೇರಿದಂತೆ ತಾಲೂಕಿನ ಸುರೇಬಾನ ಹಾಗೂ ರೇವಡಿಕೊಪ್ಪ ಗ್ರಾಮದಲ್ಲಿ ನಿರಾಶ್ರಿತರಿಗೆ ತೆರೆಯಲಾದ ಕಾಳಜಿ ಕೇಂದ್ರಗಳಿಗೆ ಮಂಗಳವಾರ ಶಾಸಕ ಮಹಾದೇವಪ್ಪ ಯಾದವಾಡ ಭೇಟಿ ನೀಡಿ ಸಂತ್ರಸ್ಥರಿಗೆ ಅಭಯ ನೀಡಿದರು.

ಹಂಪಿಹೋಳಿ ಗ್ರಾಮದ ಸಂತ್ರಸ್ಥರಿಗೆ ಸುರೇಬಾನ ಎಪಿಎಂಸಿ ಆವರಣದಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಶಾಸಕರು ಬೇಟಿ ನೀಡುತ್ತಿದ್ದಂತೆ ಅಲ್ಲಿನ ಸಂತ್ರಸ್ಥರು ಮೂರು ತಿಂಗಳಲ್ಲಿ ಮೂರು ಬಾರಿ ಪ್ರವಾಹ ಉಂಟಾಗಿ ಚಿಕ್ಕ ಮಕ್ಕಳು, ವಯೋವೃದ್ಧರೊಂದಿಗೆ ಬೀದಿಯಲ್ಲಿ ಜೀವನ ನಡೆಸುವುದು ಕಷ್ಠಕರವಾಗಿದೆ. ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಸಂತ್ರಸ್ಥರ ನೋವಿಗೆ ಸ್ಪಂದಿಸಿಲ್ಲ. ಹೀಗಾದರೆ ನಮ್ಮ ಬದುಕು ಕಟ್ಟಿಕೊಳ್ಳುವುದು ಹೇಗೆ?. ನಮಗೆ ಶೀಘ್ರ ಪರಿಹಾರ ಕಲ್ಪಿಸಿ, ಇಲ್ಲವಾದಲ್ಲಿ ವಿಷ ಕೋಡಿ ಎಂದು ಸಂತ್ರಸ್ಥರು ಶಾಸಕ ಮಹಾದೇವಪ್ಪ ಯಾದವಾಡ ಎದುರು ತಮ್ಮ ಅಳಲು ತೊಡಿಕೊಂಡರು.

ಪ್ರವಾಹಕ್ಕೆ ತುತ್ತಾದ ಪ್ರದೇಶಗಳ ಜನತೆಗೆ ನೆರವಾಗಲು ಸರಕಾರ ಸ್ಪಂದಿಸಿದೆ. ಸಂತ್ರಸ್ಥರ ಬೆನ್ನಿಗೆ ರಾಜ್ಯ ಸರಕಾರವಿದೆ. ನಿರಾಶ್ರಿತರು ಭಯಪಡುವುದು ಅಗತ್ಯವಿಲ್ಲ. ಅಧಿಕಾರಿಗಳ ಲೋಪದಿಂದ ಸಮೀಕ್ಷೆ ನಡೆಸುವಲ್ಲಿ ಕೆಲ ತಪ್ಪುಗಳು ನಡೆದಿರಬಹುದು. ಅವುಗಳನ್ನು ಸರಿಪಡಿಸಿ, ಪಕ್ಷಾತೀತವಾಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಪರಿಹಾರ ಕೊಡಿಸಲು ಪ್ರಯತ್ನಿಸುತ್ತೇನೆ. 

ಈಗಾಗಲೇ ಎನ್ಡಿಆರ್ಎಫ್ ನಿಯಮಾವಳಿಯಂತೆ ಮನೆಗಳ ಹಾನಿ ಸಮೀಕ್ಷೆ ದಾಖಲಿಸುವ ಎ.ಬಿ.ಸಿ ಕೆಟಗೇರಿಗಳ ವಿಂಗಡನೆಯಲ್ಲಿ ವ್ಯತ್ಯಾಸವಾದ ಬೆನ್ನಲ್ಲೇ ಸರಕಾರ ಎ ಮತ್ತು ಬಿ ಕೆಟಗೇರಿಗೆ 5 ಲಕ್ಷ ಸಿ ಕೆಟಗೇರಿಗೆ 25 ಸಾವಿರ ಬದಲು 50 ಸಾವಿರ ಪರಿಹಾರ ನೀಡಲು ಸರಕಾರ ಕ್ರಮ ತೆಗೆದುಕೊಂಡಿದೆ. ಒಂದೇ ಕುಟುಂಬದಲ್ಲಿ ಹಲವು ಸಹೋದರರು ವಾಸವಿದ್ದಲ್ಲಿ ಪರಿಹಾರ ನೀಡುವಲ್ಲಿ ಸೂಕ್ತ ದಾಖಲೆಗಳನ್ನು ಪರಿಶೀಲನೆ ನಡೆಸಿ ಎಲ್ಲರಿಗೂ ಪರಿಹಾರ ದೊರಕಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಸಂತ್ರಸ್ಥರು ಸಹಕರಿಸಬೇಕೆಂದು ಮನವಿ ಮಾಡಿದರು.

ನಂತರ ಕಾಳಜಿ ಕೇಂದ್ರದಲ್ಲಿನ ಆಹಾರ ತಯಾರಿಕೆ ಕುರಿತು ಪರಿಶೀಲನೆ ನಡೆಸಿ, ಕಾಳಜಿ ಕೇಂದ್ರದ ಜನತೆಗೆ ವಿತರಿಸುವ ಆಹಾರದಲ್ಲಿ ಗುಣಮಟ್ಟ ಹಾಗೂ ಶುಚಿತ್ವ ಕಾಪಾಡಿಕೊಳ್ಳಬೇಕು. ವೈದ್ಯಾಧಿಕಾರಿಗಳು ಪ್ರತಿದಿನ ಬೇಟಿ ನೀಡಿ ಜನತೆಯ ಆರೋಗ್ಯ ಪರೀಕ್ಷೆ ನಡೆಸಬೇಕೆಂದು ಸೂಚಿಸಿದರು.

ಶಾಸಕರಿಗೆ ಘೇರಾವ್:

ಸುರೇಬಾನ್ ಕಾಳಜಿ ಕೇಂದ್ರಕ್ಕೆ ಶಾಸಕ ಮಹಾದೇವಪ್ಪ ಯಾದವಾಡ ಬೇಟಿ ಸಂತೈಸಿ ಹೊರನೆಡೆಯುತ್ತಿದ್ದಂತೆ ಅಲ್ಲಿನ ಕೆಲ ಸಂತ್ರಸ್ಥರು ಮೂರು ತಿಂಗಳಾದರೂ ನಮಗೆ ಸರಕಾರದಿಂದ ಸೂಕ್ತ ಸೌಲಭ್ಯ, ವಸತಿ ಸಿಕ್ಕಲ್ಲ. ಎಲ್ಲರೂ ಬಂದು ಹೋಗುವುದು ಮಾತ್ರ ನಡೆದಿದೆ. ಮೂರು ತಿಂಗಳಾದರೂ ಶಾಶ್ವತ ವಸತಿ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ. ಇನ್ನೇಷ್ಟು ದಿನ ನರಕಯಾತನೆ ಅನುಭವಿಸುವುದು. ಪರಹಾರದ ಕುರಿತು ಸ್ಪಷ್ಠ ನಿಧರ್ಾರ ತಿಳಿಸಿ ಹೋಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ಶಾಸಕರಿಗೆ ಘೇರಾವ್ ಹಾಕಿದ ಘಟನೆ ನಡೆಯಿತು. ನಂತರ ಮಧ್ಯ ಪ್ರವೇಶಿಸಿದ ತಹಶೀಲ್ದಾರರು, ಈಗಾಗಲೇ ಗುರುತಿಸಿದ ಜಾಗೆಯಲ್ಲಿ ಶೆಡ್ ನಿಮರ್ಿಸಿ, ಒಂದು ವಾರದೊಳಗೆ ಎಲ್ಲ ಸಮಸ್ಯೆಗಳಿಗೆ ಶಾಸಕರ ನೇತೃತ್ವದಲ್ಲಿ ಪರಿಹಾರ ಕಲ್ಪಿಸುತ್ತೇವೆ ಎಂದು ಸಂತ್ರಸ್ಥರನ್ನು ಸಮಾಧಾನ ಪಡಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ರೇಣಪ್ಪ ಸೋಮಗೊಂಡ, ಎಪಿಎಂಸಿ ಸದಸ್ಯ ದ್ಯಾವಪ್ಪ ಬೆಳವಡಿ, ತಾ.ಪಂ ಸದಸ್ಯ ಶಿವಪ್ಪ ಮೇಟಿ, ಸುರೇಬಾನ ಗ್ರಾ.ಪಂ ಅಧ್ಯಕ್ಷ ಮಹಾದೇವಪ್ಪ ಮದಕಟ್ಟಿ, ಸಂಗನಗೌಡ ಪಾಟೀಲ, ತಹಶೀಲ್ದಾರ ಗಿರೀಶ ಸ್ವಾಧಿ, ತಾ.ಪಂ ಇಒ ಬಸಪ್ಪ ಕುರ್ತಕೋಟಿ, ಪಶು ವೈದ್ಯಾಧಿಕಾರಿ ಗಿರೀಶ ಪಾಟೀಲ, ಪಿಎಸ್ಐ ಆನಂದ ಡೋಣಿ ಸೇರಿದಂತೆ ಇತರರಿದ್ದರು.