ಬಾಂದಾರ ನಿರ್ಮಾಣಕ್ಕೆ ಶಾಸಕ ಯಾದವಾಡ ಚಾಲನೆ

ಲೋಕದರ್ಶನ ವರದಿ

ರಾಮದುರ್ಗ 13: ಹಳ್ಳಗಳಿಗೆ ಬಾಂದಾರ ನಿಮಾಣದಿಂದ ಅಂತರಜಲ ಹೆಚ್ಚಳವಾಗುವುದು ಪರಿಣಾಮ ಕೊಳವೆ ಬಾವಿ ಪುನಶ್ಚೇತನಗೊಂಡ ರೈತರ ಜಮೀನುಗಳಿಗೆ ನೀರಾವರಿ ಪ್ರದೇಶ ಹೆಚ್ಚಳಗೊಂಡು ರೈತ ಆರ್ಥಿಕವಾಗಿ ಸದೃಡನಾಗುತ್ತಾನೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

ಸೋಮವಾರ ತಾಲೂಕಿನ ಬಿಜಗುಪ್ಪಿ ಬಳಿ ಚಿಪ್ಪಲಕಟ್ಟಿ ಹಳ್ಳಕ್ಕೆ ಸಣ್ಣ ನೀರಾವರಿ ಇಲಾಖೆಯ ರೂ. 50 ಲಕ್ಷ ವೆಚ್ಚದಲ್ಲಿ ಬಾಂದಾರ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯನ ಸ್ವಾರ್ಥಕ್ಕೆ ಅರಣ್ಯ ಪ್ರದೇಶ ನಾಶವಾಗಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಸಮರ್ಪಕ ಬೆಳೆ ಬಾರದೆ ರೈತರ ಸಂಕಷ್ಟದಲ್ಲಿದ್ದಾರಲ್ಲದೆ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗದೆ ಕೃಷಿಯನ್ನು ಕೈಬಿಡುವ ಪರಿಸ್ಥಿತಿ ಬಂದಿದೆ ಎಂದರು.

ಸರ್ಕಾರ ರೈತರ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದ್ದು ಅದರಲ್ಲಿ ಅಂತರಜಲ ಹೆಚ್ಚಿಸಲು ಅವಶ್ಯವಿರುವಲ್ಲಿ ಬಾಂದಾರ ಮತ್ತು ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುತ್ತಿದ್ದು ಅದು ಸದುಪಯೋಗವಾಗಲು ಅಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡಬೇಕೆಂದು ಸೂಚನೆ ನೀಡಿದರು.

ಬಾಂದಾರ ನಿರ್ಮಾಣ ಪದೇ ಪದೇ ಮಾಡುವ ಕೆಲಸವಲ್ಲ ಕಾರಣ ಗುತ್ತಿಗೆದಾರರು ಹೆಚ್ಚಿನ ಲಾಭಾಂಶಕ್ಕೆ ಆಸೆ ಮಾಡದೆ ಗುಣ ಮಟ್ಟದ ಕಾಮಗಾರಿ ನಿರ್ವಹಿಸಬೇಕು ಮತ್ತು ರೈತರು ಕಾಮಗಾರಿ ಮಾಡುವ ಸಂದರ್ಭದಲ್ಲಿ ಅತಿಕ್ರಮಗಳಿದ್ದರೆ ತೆರವು ಮಾಡುವ ಮೂಲಕ ಸುಗಮ ಮತ್ತು ಶೀಘ್ರ ಕಾಮಗಾರಿ ನಡೆಯಲು ಸಹಕಾರ ನೀಡಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಮಾರುತಿ ಕೊಪ್ಪದ, ಸಣ್ಣ ನೀರಾವರಿ ಇಲಾಖೆಯ ಇಂಜನೀಯರ ಭಜಂತ್ರಿ ಸೇರಿದಂತೆ ಹಲವರು ಇದ್ದರು.