ಚಿಕ್ಕಾಂಶಿ ಹೊಸೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಶ್ರೀನಿವಾಸ ಮಾನೆ ದಿಢೀರ್ ಭೇಟಿ
ಹಾನಗಲ್ 05 :ತಾಲೂಕಿನ ಚಿಕ್ಕಾಂಶಿ ಹೊಸೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಶ್ರೀನಿವಾಸ ಮಾನೆ ದಿಢೀರ್ ಭೇಟಿ ನೀಡಿ ಅನಧಿಕೃತವಾಗಿ ಗೈರಾದ ವೈದ್ಯರು, ಸಿಬ್ಬಂದಿಗೆ ಬಿಸಿ ಮುಟ್ಟಿಸಿದರು. ಸಿಬ್ಬಂದಿ ಹಾಜರಿ ಪುಸ್ತಕದ ಮೇಲೆ ಕಣ್ಣಾಡಿಸಿದ ಶಾಸಕ ಮಾನೆ,ಆಡಳಿತ ವೈದ್ಯಾಧಿಕಾರಿ ಮತ್ತು ಪ್ರಥಮ ದರ್ಜೆ ಸಹಾಯಕರು ಅನಧಿಕೃತವಾಗಿ ಗೈರಾಗಿದ್ದನ್ನು ಗಮನಿಸಿ,ಹಾಜರಿ ಪುಸ್ತಕದಲ್ಲಿ ನಮೂದಿಸಿದರು. ಫಾರ್ಮಸಿ ಅಧಿಕಾರಿ ವಿರುದ್ಧ ಸಹ ದೂರುಗಳಿರುವ ಬಗ್ಗೆ ಸಹ ನಮೂದಿಸಿ, ಯಾವುದೇ ಕಾರಣಕ್ಕೂ ಕರ್ತವ್ಯಲೋಪ ಸಹಿಸುವುದಿಲ್ಲ. ಮೇಲಾಧಿಕಾರಿಗಳ ಅನುಮತಿ ಪಡೆದು ರಜೆ ಪಡೆಯಬೇಕು. ಕರ್ತವ್ಯದ ಮೇಲೆ ಬೇರೆಡೆ ತೆರಳಿದರೆ ಕಡ್ಡಾಯವಾಗಿ ಹಾಜರಿ ಪುಸ್ತಕದ ಮೇಲೆ ನಮೂದಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು. ಟಿಹೆಚ್‌ಓ ಡಾ.ಲಿಂಗರಾಜ ಕೆ.ಜಿ. ಅವರಿಗೆ ಕರೆ ಮಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಾರ್ಯ ನಿರ್ವಹಣೆಯ ಮೇಲೆ ನಿಗಾ ವಹಿಸಬೇಕು. ಕರ್ತವ್ಯ ಮತ್ತು ಸಮಯಪಾಲನೆ ಮಾಡದವರ ವಿರುದ್ಧ ಕ್ರಮ ಜರುಗಿಸುವಂತೆ ಸೂಚಿಸಿದರು. ಓಷಧ ವಿಭಾಗ, ಒಳ ಮತ್ತು ಹೊರ ರೋಗಿಗಳ ವಿಭಾಗ, ಓಷಧ ವಿಭಾಗ ಸೇರಿದಂತೆ ಪ್ರತಿಯೊಂದು ವಿಭಾಗಗಳಿಗೂ ಭೇಟಿ ಮಾಡಿ ಸೌಲಭ್ಯಗಳ ಪರೀಶೀಲನೆ ನಡೆಸಿದರು. ಚಿಕಿತ್ಸೆಗೆ ಆಗಮಿಸಿದ್ದ ಗ್ರಾಮಸ್ಥರನ್ನು ಮಾತನಾಡಿಸಿ, ಮಾಹಿತಿ ಪಡೆದರು.ಇದೇ ಸಂದರ್ಭದಲ್ಲಿ ಕೇಂದ್ರವನ್ನು ಸ್ವಚ್ಛವಾಗಿಟ್ಟುಕೊಂಡು, ಉತ್ತಮ ಸೇವೆ ನೀಡುತ್ತಿರುವ ದಾದಿಯನ್ನು ಅಭಿನಂದಿಸಿದರು.